ಬಿಳಿ ಹಾಳೆಯನ್ನು ತೆರೆದು ಸುಮ್ಮನೇ ಮನಸ್ಸಿಗೆ ಬಂದ ಶೀರ್ಷಿಕೆಯನ್ನು ಗೀಚಿ ಅದನ್ನೇ ನೋಡುತ್ತಾ ಇಡೀ ದಿನ ಕಳೆಯುವ ಅಭ್ಯಾಸ ನನ್ನದ್ದು. ಬರಹ ಎಂದಲ್ಲ, ಯಾವುದೇ ತರಹವಾಗಲೀ ಶೀರ್ಷಿಕೆಗಳು ನನ್ನನ್ನು ಬಹುಬೇಗನೇ ಸೆಳೆದುಬಿಡುತ್ತವೆ. ಶೀರ್ಷಿಕೆಯು ನನ್ನನ್ನು ಸೆಳೆಯದಿದ್ದರೆ ಬಹುಶಃ ಅಂತಃಸತ್ವ ಅತ್ಯದ್ಭುತವಾಗಿದ್ದರೂ ಬೇಸತ್ತು ಬಿಟ್ಟುಬಿಟ್ಟೇನು. ಅದಕ್ಕೇ ಇರಬೇಕು, ಉಪೇಂದ್ರರ ಸಿನಿಮಾಗಳನ್ನು ನೋಡದೇ ಬಿಡಲು ಮನಸ್ಸಾಗುವುದಿಲ್ಲ. ಹೊಟೇಲ್ ಮೆನ್ಯೂನಲ್ಲಿ ‘PRAWN-STAR’ ಎಂಬ ಹೆಸರನ್ನು ನೋಡಿದರೆ ಕಣ್ಣರಳುತ್ತದೆ. ಕಾಕ್ಟೈಲಿನಲ್ಲಿ ‘PENICHILLIN’ ನೋಡಿದರೆ ಎದೆಬಡಿತ ಹೆಚ್ಚಾಗಿ, ಅದು ಹೇಗಾದರೂ ಇರಲಿ, ‘ವಸಿ ತಗಬಾರಣೋ!’ ಎಂದು ಕಣ್ಣರಳಿಸಿಬಿಡುತ್ತೇನೆ. ಸಾಮಾನ್ಯವಾಗಿ ತಲೆಗೆ ಬಂದ ವಿಚಿತ್ರವಾದ ಶೀರ್ಷಿಕೆಯನ್ನು ಬರೆದು, ಅದನ್ನು ವಿಸ್ತರಿಸುವ ಪ್ರಯತ್ನಕ್ಕೆ ಮುಂದಾಗುವ ನಾನು ಇನ್ನು ಕೆಲವೊಮ್ಮೆ, ಹೊಳೆದ ವಿಚಾರಕ್ಕೆ ಶೀರ್ಷಿಕೆಯನ್ನು ಯೋಚಿಸಿ ಕೊನೆಯಲ್ಲಿ ಕೊಂಡಿಗಳನ್ನು ಹುಡುಕಿ ಸಿಕ್ಕಿಸುವ ಪ್ರಯತ್ನವನ್ನು ಮಾಡುತ್ತೇನೆ. ಅದಿಲ್ಲವಾದರೆ, ನಾನೇ ಕೊಂಡಿಯಲ್ಲಿ ಸಿಕ್ಕಿ ಅತ್ತು ಒದ್ದಾಡುತ್ತೇನೆ.

ಅದೇಕೋ, ಪುಟ ತೆರೆದೊಡನೆಯೇ ಹೊಳೆದ ಶೀರ್ಷಿಕೆಯಿದು, “ನೀ ಬಂದು ನಿಂತಾಗ, ನಿಂತು ನೀ ನಕ್ಕಾಗ”. ಯಾಕೆ, ಎಲ್ಲಿ, ಹೇಗೆ ಎಂದು ನನ್ನ ಹೊಟ್ಟೆಬಾಕತನದ ಮೇಲಾಣೆಯಾಗಿಯೂ ತಿಳಿಯದು. ಬೆಳಿಗ್ಗೆ ಜಾಗಿಂಗಿಗೆ ಹೋದಾಗ ಕೆಲವು ಹುಡುಗಿಯರನ್ನು ನೋಡಿ ಹೆಚ್ಚುವರಿ ನಾಲ್ಕು ಸುತ್ತು ಹೊಡೆದದ್ದು ನಿಜ, ಆದರೆ ಈ ಶೀರ್ಷಿಕೆಯನ್ನು ಟೈಪಿಸಲು ಪ್ರೇರೇಪಿಸುವಷ್ಟು ತಲೆಸುತ್ತು ನನಗೆ ಬರಲಿಲ್ಲ. ನಾ ಬರೆದ ಶೀರ್ಷಿಕೆಯನ್ನು ನಾನೇ ಒಮ್ಮೆ ಓದಿದರೆ ಒಮ್ಮೆ ಒಲವಿನಾಮೃತವನ್ನು ಕುಡಿದು ಮತ್ತಿನಲ್ಲಿ ತೇಲುತ್ತಾ ನನ್ನಾಕೆಯ ಬಗೆಗೆ ಪುಟಗಳನ್ನೇ ಗೀಚುವ ಮನಸ್ಸಾಗುತ್ತದೆ. ಏನು ಮಾಡುವ, ನಾನು ಕವಿಯಾಗಿ ಪ್ರೀತಿಯ ಬಗ್ಗೆ ಬರೆಯಹೊರಟರೆ ಪದಮಿತಿ ನನ್ನ ಬೆರಳಿಗೆ ದೀರ್ಘದಂಡ ನಮಸ್ಕಾರವನ್ನು ಮಾಡಿಬಿಡುವ ಭಯ. ಆದರೂ, ಬರೆದ ಶೀರ್ಷಿಕೆಯನ್ನು ಅಳಿಸಲು ಮನಸಾಗಲಿಲ್ಲ. ಶೀರ್ಷಿಕೆಯನ್ನೇ ನೋಡುತ್ತಾ ಕುಳಿತೆ. ಜಯಗೋಪಾಲರ ಸಾಹಿತ್ಯ ಅದೆಷ್ಟು ಆಪ್ತವಾಗಿದೆಯೆಂದೆನಿಸಿ, ಅವರ ಸಾಹಿತ್ಯದ ಬಗ್ಗೆಯೇ ಬರೆದುಬಿಡುವ ಎಂದು ಹವಣಿಸಿದೆ. ಮತ್ತೊಂದು ಮನಸ್ಸು, “ಅಯ್ಯೋ ಪಾಪಿ, ಹುಡುಗಿಯ ಬಗೆಗೆ ಬರೆಯುತ್ತೇನೆ ಅಂತ ಸುಳಿವನ್ನು ಕೊಟ್ಟು, ಸಾಹಿತ್ಯದ ಬಗ್ಗೆ ಬರಿತೀನಿ ಅಂದ್ಯಲ್ಲೋ, ಮನುಷ್ಯನೇ ನೀನು” ಎಂದು ರಾಜಕುಮಾರರ ಹಿರಣ್ಯ ಕಶ್ಯಪುವಿನ ಆಕ್ಸೆಂಟಿನಲ್ಲಿ ದಬಾಯಿಸಿತು. ಪ್ರಹ್ಲಾದನಂತೆ ಗಪ್ಪನೆ ಸುಮ್ಮನಾಗಿ, ಮತ್ತೆ ಯೋಚನಾಪಾನಕದಲ್ಲಿ ಸಕ್ಕರೆಯಾದೆ. ಆಗಾಗ, ಕಯಾದುವಿನ ರೂಪದಲ್ಲಿ ಯಾರಾದರೂ ಬಂದು ವಿಷವನ್ನು ಉಣಿಸಲಿ ಎಂದು ಬಯಸಿದರೂ, ಒಂದು ಶೀರ್ಷಿಕೆಯಿಂದಾಗಿ ಆ ನಿರ್ಧಾರಕ್ಕಾಗಿ ಬರುವುದು ಸರಿಯಲ್ಲವೆನಿಸಿ ಸುಮ್ಮನಾದೆ.

ಇವಿಷ್ಟೂ ನನ್ನ ಮನಸ್ಸಿನಲ್ಲಿ ನುಸುಳಿ, ನನ್ನ ತಲೆಯನ್ನು ರಸಾಯನವನ್ನಾಗಿಸಿದ್ದರೆ, ಪಾಪ, ನನ್ನ ರೂಂಮೇಟ್ ಎದುರಿನಲ್ಲಿ ಕುಳಿತು ನನ್ನ ಬಾಹ್ಯಚರ್ಯೆಗೆ ಸಾಕ್ಷಿಯಾಗಿದ್ದ. ಪುಸ್ತಕವನ್ನು ದಿಟ್ಟಿಸಿ ನೋಡಿ, ಪೆನ್ನನ್ನು ನಾಲ್ಕು ಬಾರಿ ಕಚ್ಚಿ ಆತನ ತಲೆಯ ಮೇಲೆ ಎಸೆದು, ಏನೂ ಆಗಲಿಲ್ಲವೆಂಬಂತೆ ಮತ್ತೆ ಹೋಗಿ ಅದನ್ನು ಎತ್ತಿ ತಂದೆನಂತೆ. ಕುಳಿತ ಜಾಗ ಸರಿಯಿಲ್ಲವೆಂದೆನಿಸಿ, ಟಾಯ್ಲೆಟ್ಟಿಗೆ ಹೋಗಿ ಬಾಗಿಲನ್ನು ತೆರೆದು, ಕಮ್ಮೋಡಿನ ಮೂತಿಯನ್ನು ಮುಚ್ಚಿ ಗೋಡೆಯನ್ನು ನೋಡುತ್ತಾ ಕುಳಿತೆನಂತೆ, ಇದು ನಿಜವಿರಬಹುದು, ಆ ಜಾಗ ನನಗೇನೋ ಬಹಳವೇ ಇಷ್ಟ; ಜೀ.ಓ.ಟೀಯ ತುಕ್ಕುಸಿಂಹಾಸನದಂತೆ. ನನ್ನ ತಲೆಗೆ ರಕ್ತ ಸರಿಯಾಗಿ ಹೋಗಲಿಲ್ಲವೆಂದು ಮತ್ತೆ ಹಿಂತಿರುಗಿ ಬಂದು ಶೀರ್ಷಾಸನ ಮಾಡಿ ಕೆಲಕಾಲ ಕಳೆದೆನಂತೆ. ಪುಣ್ಯಾತ್ಮ, ಇಷ್ಟನ್ನೂ ವೀಡೀಯೊ ಮಾಡಿ ನನಗೆ ತೋರಿಸಿ ಹೊಟ್ಟೆ ಹಿಡಿದು ನಕ್ಕ. ಅವನನ್ನು ಅವನೇ ಸುಧಾರಿಸಿಕೊಂಡು, ‘ಕೊಯೀ ನಾ, ಹೋ ಜಾತಾ ಹೆ ಕಭೀ ಕಭೀ, ತು ಫಿಕರ್ ಮತ್ ಕರ್, ತುರಂತ್ ಜಾಯೇಂಗೇ, ಪಾಸ್ ಹೀ ಹೋಂಗೇ ಕುಚ್ ನ ಕುಚ್ ಮೆಡಿಸಿನ್ ದೇನೇವಾಲೇ’ ಎಂದು ಕನ್ನಡದ ಲವಲೇಷವೂ ಇಲ್ಲದ ಹಿಂದಿಯಲ್ಲಿ ನುಡಿದಿದ್ದನ್ನು ನನ್ನ ಕನ್ನಡಪ್ರೇಮೀ ಕಿವಿಗಳು ಅಲಕ್ಷಿಸಿದ್ದನ್ನು ಮೆಚ್ಚಿ, ಮತ್ತೆ ಪುಸ್ತಕವನ್ನು ಹಿಡಿದೆ. ಆತ ಏನು ಸಮಸ್ಯೆಯೆಂದು ಕೊನೆಗೂ ತಾಳ್ಮೆಗೆಟ್ಟು ಕೇಳಿದ. ನನ್ನ ಸಮಸ್ಯೆಯನ್ನು ಆತನಿಗೆ ಒಂದು ತಾಸು ವ್ಯಯಿಸಿ ಸಂಪೂರ್ಣವಾಗಿ ವಿವರಿಸಿದೆ. ಆತ ಜೋರಾಗಿ ನಕ್ಕು, ಶೀರ್ಷಿಕೆಯೇನೆಂದು ಕೇಳಿದ. ಕನ್ನಡದಲ್ಲಿ ಹೇಳಿಯೂ ಪ್ರಯೋಜನವಿಲ್ಲವೆಂದು ತಿಳಿದಿದ್ದ ನನ್ನ ಮಿದುಳು ಆತನಿಗೆ ಆ ಶೀರ್ಷಿಕೆಯನ್ನು ಕೊಟ್ಟುಬಿಟ್ಟಿತು. ಆತ ಅರ್ಥವಾದವನಂತೆ ತಲೆಯಾಡಿಸಿ, ‘ತು ಕಲ್ ಕೆ ಬಂದ್ ಕೆ ಬಾರೆ ಮೇ ಕ್ಯಾ ಲಿಖೇಗಾ, ಪಾಗಲ್’ ಎಂದ. ನನ್ನ ಎದೆಯೊಳಗಿನಿಂದ ಹೊರಟಿದ್ದ ರಕ್ತ, ನರನಾಡಿಗಳೆಲ್ಲೆಲ್ಲಾ ಸಂಚಾರವಾಗಿ, ಮಿದುಳನ್ನು ಆಕ್ರಮಿಸಿ, ಆತನ ಕನ್ನಡರಹಿತ ಕಿವಿಗಳಿಗೆ ವಂದಿಸಿ, ಆಗಾಗ ಜರುಗುವ ‘ಬಂದ್’ ಕುರಿತು ಬರೆಯತೊಡಗಿದೆ, ಮೂಲೆಯಲ್ಲೆಲ್ಲೋ ನನಗೆ ಸಿಗದ ಪನ್ ಈ ಪರದೇಸಿಗೆ ಸಿಕ್ಕಿತೆಂದು ನಾಭಿ ಬಿಸಿಯೂ ಆಯಿತು. ತೋಳೇರಿಸಿ, ಮೂಗೇರಿಸಿ ಬರೆಯತೊಡಗಿದೆ.

ಅಷ್ಟಾದಮೇಲೆ ಮತ್ತೂ ಜಟಿಲವಾದ ಸಮಸ್ಯೆ ಉದ್ಭವವಾಯಿತು. ಇಷ್ಟು ಗಂಭೀರವಾದ ವಿಚಾರದ ಮೇಲೆ ಬರೆಯುವುದಾದರೂ ಹೇಗೆ! ಬಹಳಷ್ಟು ಸಾಮಾಜಿಕ ವಿಚಾರಗಳು ನನ್ನ ಹಿಡಿತಕ್ಕೆ ಸಿಗುವುದಿಲ್ಲ. ಮೋದಿಯವರ ಪ್ಲ್ಯಾನುಗಳು ಫ್ಲಾಪ್ ಆದವೆಂದು ಜನರು ಹೇಗೆ ಹೇಳುತ್ತಾರೆಂದೂ, ಪದ್ಮಾವತಿಯಲ್ಲಿ ಖಿಲ್ಜಿಯನ್ನು ತೋರಿಸಲಿ ಅಥವಾ ಅವನ ಸೋದರತ್ತೆಯನ್ನು ತೋರಿಸಲಿ ಇವರಿಗೇನು ನಾಡಿದೋಷವೆಂದೂ ಸರಿಯಾಗಿ ಅರ್ಥವಾಗುವುದಿಲ್ಲ. ದೂರದಲ್ಲಿ ಯಾರೋ ಜೈಲಿಗೆ ಹೋದರೆ ಇಲ್ಲಿಯ ಹದಿನೈದು ಗಾಡಿಗೆ ಬೆಂಕಿ ಯಾಕೆಂದೂ, ಅವನ್ಯಾರಿಗೋ ಆಸ್ಕರ್ ಬರಲಿಲ್ಲವೆಂದು ಇವರಿಗೇನು ತಲೆತುರಿಕೆಯೆಂಬುದೂ ನನಗೆ ಅಂದಾಜಾಗುವುದಿಲ್ಲ. ಅಂತಹುದರಲ್ಲಿ, ಎರಡೆರಡು ಬಾರಿ ‘ಬಂದ್’ ಎಂದು ಹೇಳಿದರೆ, ನನ್ನ ಪರಿಸ್ಥಿತಿ ಏನಾಗಬೇಕು. ನನ್ನ ಮನದ ತುಂಬೆಲ್ಲಾ ಪ್ರಶ್ನೆಗಳೇ. ಇದು ಬಹಳ ಮಜಲುಗಳುಳ್ಳ ವಿಚಾರ ಲಹರಿಯೇನಲ್ಲ. ಸುಮ್ಮನೆ ಏನೂ ತಿಳಿಯದವನಾದ್ದರಿಂದ ಕೇಳುತ್ತಿರುವುದು, ಯಾವುದೋ ಬೇಡಿಕೆಯನ್ನು ಈಡೇರಿಸಿಕೊಳ್ಳುವ ವಿಚಾರದಲ್ಲಿ ಬಂದುಗಳು ನಡೆಯುತ್ತಿದ್ದರೆ ನನ್ನದೊಂದು ಅನುಮಾನ. ಬಂದ್ ಮೂಲಕವೇ ಉತ್ತರವನ್ನು ಹುಡುಕುವುದಾದರೆ, ರೈತರ ಸಮಸ್ಯೆಗಳು, ಸಾಲ ಮನ್ನಾ, ಬೀದಿ ಸ್ವಚ್ಛತೆ, ಉದ್ಯೋಗ ಖಾತ್ರಿ, ವಿದ್ಯಾರ್ಥಿಗಳ ಅಹವಾಲು ಪೂರೈಕೆ, ವಿದ್ಯುತ್ ಸರಬರಾಜು, ನೀರಿನ ಸಮಸ್ಯೆ-ಇಂತಹ ಸಮಸ್ಯೆಗಳಿಗೆಲ್ಲಾ ವರ್ಷದ ಪ್ರತೀದಿನವೂ ಬಂದ್ ಮಾಡಿ, ಮಕ್ಕಳಿಗೆಲ್ಲಾ ಒಂದು ವರ್ಷ ರಜೆಯನ್ನು ಘೋಷಿಸಬಹುದಲ್ಲ. ಅಥವಾ ಜನರು ಬಂದ್ ಮಾಡಿದಾಗ ಮಾತ್ರವೇ ಸರ್ಕಾರ ಬೇಡಿಕೆಯನ್ನು ಪೂರೈಸುವುದಾದರೆ, ಐದು ವರ್ಷ ಕೆಲಸವನ್ನೇ ಮಾಡುವುದು ಬೇಡ ತಾನೇ! ಯಾವಾಗ ಜನ ಅಹವಾಲನ್ನು ಇಡುತ್ತಾರೊ, ಆಗ ಕೈಯೆತ್ತಿದರೆ ಮುಗಿಯಿತು. ಯೋಚಿಸಿ ನೋಡಿ, ಚಿಕ್ಕವರಿದ್ದಾಗ ಜಾತ್ರೆಯಲ್ಲಿ ಗೊಂಬೆ ಕೊಡಿಸುವುದು ಅಪ್ಪಯ್ಯನ ಜವಾಬ್ದಾರಿಯಾಗಿದ್ದರೂ ಆತ ಕೊಡಿಸುವುದು ತಡವಾದಾಗ ಎರಡು ದಿನ ಉಪವಾಸ ಇದ್ದು ಬೇಡಿದ ಮೇಲೆ ಆತ ತಂದುಕೊಟ್ಟಿರಬಹುದು, ಆದರೆ, ಆ ಎರಡು ದಿನ ಊಟವಿಲ್ಲದೇ ಸೊರಗಿದವರು ಯಾರು?

ಕೊನೆಗೂ ಇವೆಲ್ಲವೂ ನನ್ನ ಬುದ್ಧಿಶಕ್ತಿಗೆ ಮೀರಿದ ಸ್ವತ್ತು ಎಂದು ತಿಳಿದು, ಬರೆದ ಸಾಲುಗಳೆಲ್ಲವನ್ನೂ ಅಳಿಸಿ, ಎಷ್ಟು ಕೇಳಿದರೂ ಬೇಸರವೆನಿಸದ ‘ನೀ ಬಂದು ನಿಂತಾಗ, ನಿಂತು ನೀ ನಕ್ಕಾಗ’ ಹಾಡನ್ನು ಕೇಳಿ, ರಾಜಕುಮಾರ್ ರೀತಿಯೇ ಕೈಯನ್ನು ಅಲುಗಿಸಲು ನೋಡಿ ಗೋಡೆಗೆ ರಪ್ಪನೆ ಕೈ ತಾಗಿಸಿಕೊಂಡು, ‘ತ್ಸ್’ ಎಂದು ಮೃದುವಾದ ನೋವಿನಿಂದ ಕೈಯುಜ್ಜುತ್ತಾ ನಿದ್ರೆಗೆ ಜಾರಿದೆ.

Home Forums ನೀ ಬಂದು ನಿಂತಾಗ, ನಿಂತು ನೀ ನಕ್ಕಾಗ

This topic contains 0 replies, has 1 voice, and was last updated by  Yashas Nagar 6 months, 3 weeks ago.

You must be logged in to reply to this topic.