ನನ್ನನ್ನು ಇತ್ತೀಚಿಗೆ ಬಹಳ ಕಾಡಿದ ಸಾಲುಗಳಿವು. “ನೀ ಮಾಯೆಯೊಳಗೊ ನಿನ್ನೊಳು ಮಾಯೆಯೋ”, ಕನಕದಾಸರ ಈ ಕೀರ್ತನೆಯನ್ನು ನಾವೆಲ್ಲರೂ ಬಹಳ ಸಾರಿ ಕೇಳಿಯೇ ಇರುತ್ತೇವೆ. ಆದರೆ ಎಲ್ಲರೂ ಈ ಕೀರ್ತನೆಯ ಆಳಕ್ಕಿಳಿದು ಅನುಭವಿಸಿದ್ದಾರೆಯೆ ಎಂಬುದು ನನಗೇನೋ ಅನುಮಾನ. ಇಲ್ಲಿ ಮಾಯೆ ಎಂಬುದು ಆಸೆ. ಒಳ್ಳೆಯ ಹುದ್ದೆ, ಲಾಭ, ತನಗಿಷ್ಟದ ಗಂಡು ಹೆಣ್ಣು, ಇನ್ನೂ ಹಲವಾರು. ಒಂದು ರೀತಿಯಲ್ಲಿ ಹೇಳುವುದಾದರೆ ನಮ್ಮೆಲ್ಲರ ನಿತ್ಯದ ಓಟ ಈ ಮಾಯೆಯ ಸುತ್ತಲೇ ಸುತ್ತುವಂತಹುದು.

ಮೊದಲು ನಮ್ಮ ಮನದಲ್ಲಿ ಚಿಗುರೊಡೆವ ಈ ಮಾಯೆಯ ಬೀಜ ನಮ್ಮ ದಾಸನಾಗಿರುತ್ತದೆ. ನೀವು ಒಂದು ಹೆಣ್ಣನ್ನು ಆಸೆ ಪಡುತ್ತೀರಿ ಎಂದಿಟ್ಟುಕೊಳ್ಳೋಣ; ಆಕೆ ನಿಮಗೆ ಸಿಗಲಿಲ್ಲವೆಂದಾಗ ಸ್ವಲ್ಪ ದಿನ ದುಃಖಿಸಿ ಆಮೇಲೆ ಮರೆತುಬಿಡುತ್ತೀರಿ. ಅದೇ, ಆ ಹೆಣ್ಣು ನಿಮಗೊಲಿದಳು ಅಂದಿಟ್ಟುಕೊಳ್ಳಿ. ಆಗ ನಿಂತರೂ ಕೂತರೂ ಅವಳದೆ ಧ್ಯಾನ. ಮೊದಲು ಆಕೆಯೊಂದು ಆಸೆ, ನಂತರ ಆಕೆಯೇ ಜೀವನ. ನೀವು ಬಹಳ ಗಾಢವಾಗಿ ಪ್ರೀತಿಸುತ್ತಿರುವ ಪ್ರೇಮಿಗಳಿಗೆ ಭವಿಷ್ಯದ ಆತಂಕಗಳ ಬಗ್ಗೆ ವಿವರಿಸಿ ನೋಡಿ; ಊಹ್ಞೂ, ಜಪ್ಪಯ್ಯ ಎಂದರೂ ಅವರು ನಿಮ್ಮ ಮಾತಿಗೆ ಕ್ಯಾರೇ ಅನ್ನುವುದಿಲ್ಲ. ಪ್ರೀತಿಗಾಗಿ ಏನು ಬೇಕಾದರೂ ಅನುಭವಿಸುತ್ತೇವೆ ಅಂತಿರುತ್ತಾರೆ. ಈ ಹಂತದಲ್ಲೇ ನಮ್ಮೊಳಗಿರುವ ಮಾಯೆ ನಿಧಾನವಾಗಿ ನಾವಾಗತೊಡಗುವುದು. ಅದು ಹಾಗೆ ಮುಂದುವರಿದರೆ ನಾವೇ ಮಾಯೆಯಾಗಿರುತ್ತೇವೆ. ಆ ಪ್ರೇಮಿಗಳಿಗೆ ಮದುವೆಯಾಗುವುದೊಂದು ಬಿಟ್ಟರೆ ಮತ್ತೇನೂ ಬೇಕೆಂದೆನಿಸುವುದಿಲ್ಲ. ಅಲ್ಲಿಗೆ ನಮ್ಮೊಳು ಹೊಕ್ಕ ಆ ಮಾಯೆಯ ಬೀಜ ನಿಧಾನವಾಗಿ ಮರವಾಗಿ ತನ್ನ ಗುರಿ ಸಾಧಿಸಿರುತ್ತದೆ.

ಸ್ವಲ್ಪ ದಿನದಲ್ಲಿ ಆ ಮಾಯೆಗೆ ಈ ದೇಹ ಬೇಡವೆನಿಸುತ್ತದೆ. ಅದಕ್ಕೆ ಇನ್ನೊಬ್ಬನ ಮನಸ್ಸನ್ನು ಹೊಕ್ಕು, ಅವನನ್ನು ತನ್ನ ದಾಸನನ್ನಾಗಿಸುವ ತವಕ. ಆವಾಗಲೇ ಈ ದಂಪತಿಗೆ ಜೀವನದ ನಿಜವಾದ ಕಷ್ಟಗಳ ಪರಿಚಯವಾಗುವುದು. ಜೀವನ ಎಂದುಕೊಂಡವಳು ಭ್ರಮೆಯಾಗಿ, ಜೀವನದ ಕಷ್ಟಗಳು ಎಡೆಯೊಡ್ಡುವ ಅನಿವಾರ್ಯತೆ ಸೃಷ್ಟಿಯಾಗುವುದು.

ನಾವು ಯಾರೂ ಈ circular movement ಗೆ ಹೊರತಲ್ಲ.  ಹಾಗಾದರೆ ಇಲ್ಲಿ ತಪ್ಪಾಗಿದ್ದೆಲ್ಲಿ? ನಮ್ಮೊಳು ಮಾಯೆ ಹುಟ್ಟಿದ್ದು ತಪ್ಪಾ? ಖಂಡಿತ ಅಲ್ಲ, ಆಸೆಯಿದ್ದರೆ ತಾನೇ ಜೀವನ. ಹಾಗಾದರೆ ನಾವು ಮಾಯೆಯಾಗಿದ್ದು ತಪ್ಪಾ? ನನ್ನ ಅಭಿಪ್ರಾಯದಂತೆ ಅದೂ ತಪ್ಪಲ್ಲ. ಯಾವುದೇ ಭಾವವೂ ಹಂತಹಂತವಾಗಿ ತೀವ್ರವಾಗುವುದು ಮನುಷ್ಯನ ಸಹಜಗುಣ. ಇಲ್ಲಿ ನಿಜವಾಗಿಯೂ ತಪ್ಪಾಗಿರುವುದು ನಮ್ಮ ಗ್ರಹಿಕೆಯಲ್ಲಿ. ನಮ್ಮೊಳಗಿರುವ ಮಾಯೆ ನಾವಾಗುವ transition ಅನ್ನು ಗ್ರಹಿಸಲು ಸೋಲುವ ನಮ್ಮ ವಿವೇಚನೆಯೇ ಇಲ್ಲಿ ಅಪರಾಧಿ.

ನಮ್ಮ ಜೀವನ ಯಾಂತ್ರಿಕವಾಗಿದೆ ಎಂದು ಹೇಳುವವರು,  ಸದಾ ಮೊಬೈಲ್‍ನಲ್ಲೇ ಮನೆ ಮಾಡಿ ಕೂತಿರುವವರೆಲ್ಲ ತಮಗರಿವಿಲ್ಲದೆ ಈ ರೀತಿ ಯಾವುದೇ ಮಾಯೆಗೆ ಸಿಲುಕಿ ತಮ್ಮ ಖುಷಿಗಳನ್ನೇ ಕಳೆದುಕೊಂಡಿರುತ್ತಾರೆ.  ನಮ್ಮ ನಿಮ್ಮ ನಡುವೆ ಈ ರೀತಿ ಮಾಯೆಯಾಗಿರುವ ಎಷ್ಟೋ ಜನರಿದ್ದಾರೆ. ಅಥವಾ ನಾವೇ ಮಾಯೆಯಾಗಿದ್ದಿವಾ? ಗೊತ್ತಿಲ್ಲ, ಒಮ್ಮೆ ಯೋಚಿಸಿ.

ಕನಕದಾಸರ ಹೆಸರಾಂತ ಕೀರ್ತನೆಗಳಲ್ಲಿ ನೀ ಮಾಯೆಯೊಳಗೊ ನಿನ್ನೊಳು ಮಾಯೆಯೋ ಸಹ ಒಂದು. ಯಾರಾದರೂ ಓದದವರಿದ್ದರೆ ಈ ಕೆಳಗಿನಂತಿದೆ ಆ ಕೀರ್ತನೆ:

ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ
ನೀ ದೇಹದೊಳಗೊ ನಿನ್ನೊಳು ದೇಹವೊ ಹರಿಯೆ||

ಬಯಲೊಳಗೆ ಆಲಯವೊ ಆಲಯದೊಳಗೆ ಬಯಲೊ
ಬಯಲು ಆಲಯವೆರಡು ನಯನದೊಳಗೊ
ನಯನ ಬುದ್ಧಿಯ ಒಳಗೊ ಬುದ್ಧಿ ನಯನದ ಒಳಗೊ
ನಯನ ಬುದ್ಧಿಗಳೆರಡು ನಿನ್ನೊಳಗೊ ಹರಿಯೆ || 1 ||

ಸವಿಯು ಸಕ್ಕರೆಯೊಳಗೊ ಸಕ್ಕರೆಯು ಸವಿಯೊಳಗೊ
ಸವಿಯು ಸಕ್ಕರೆ ಎರಡು ಜಿಹ್ವೆಯೊಳಗೊ
ಜಿಹ್ವೆ ಮನಸಿನ ಒಳಗೊ ಮನಸು ಜಿಹ್ವೆಯ ಒಳಗೊ
ಜಿಹ್ವೆ ಮನಸುಗಳೆರಡು ನಿನ್ನೊಳಗೊ ಹರಿಯೆ || 2 ||

ಕುಸುಮದೊಳು ಗಂಧವೊ ಗಂಧದೊಳು ಕುಸುಮವೊ
ಕುಸುಮ ಗಂಧಗಳೆರಡು ಆಘ್ರಾಣದೊಳಗೊ
ಅಸಮಭವ ಕಾಗಿನೆಲೆಯಾದಿಕೇಶವರಾಯ
ಉಸುರಲೆನ್ನಳವಲ್ಲ ಎಲ್ಲ ನಿನ್ನೊಳಗೊ ಹರಿಯೆ || 3 ||

Home Forums ನನ್ನೇ ನಾ ಹುಡುಕಿದೆ ಮಾಯೆಯೊಳಗೆ

This topic contains 0 replies, has 1 voice, and was last updated by  Vasanth Bhat 7 months, 3 weeks ago.

You must be logged in to reply to this topic.