ಇಂಗ್ಲೀಷಿನಲ್ಲಿ The sound of silence ಎಂಬ ಮಾತಿದೆ ಅಂದರೆ ಮೌನದ ಮಾತು. ಮೌನವು ಮಾತಿಗಿಂತ ಹೆಚ್ಚು ಭಾವನೆಗಳನ್ನು ಹೊರಹಾಕುತ್ತದೆ, ಅದೊಂದು ಆಂತರ್ಯದ ಶಕ್ತಿ; ಏಕೆಂದರೆ ಮೌನಿಯಾಗಿರುವುದು ಅಷ್ಟು ಸುಲಭವಲ್ಲ.! ಬೇಕೆಂದರೆ ಒಂದು ಸವಾಲನ್ನು ಸ್ವೀಕರಿಸಿ – ಒಂದು ದಿನ ಯಾರೊಟ್ಟಿಗೂ ಮಾತಡದೆ ಇರುತ್ತೇನೆ ಅಂತ. ನಿಮ್ಮಲ್ಲಿ ಹೆಚ್ಚಿನವರಿಗೆ ಅದನ್ನು ಪೂರೈಸಲು ಖಂಡಿತ ಸಾಧ್ಯವಾಗಲಿಕ್ಕಿಲ್ಲ. ಮೌನವಾಗಿ ಹತ್ತು ವರ್ಷ ದೇಶವಾಳಿದ ಮನಮೋಹನ್ ಸಿಂಗ್’ರಂತಹ ಕೆಲವೇ ಕೆಲವರಿಗೆ ಅದು ಸಾಧ್ಯವಾಗಬಹುದೇನೋ. ಈಗಲೂ ನೋಡಿ, ಎಷ್ಟೋ ಹೆಸರಾಂತ ಮಠಾಧೀಶರು ದಿನದ ಕೆಲವು ಸಮಯವನ್ನು ಬಿಟ್ಟರೆ ಹೆಚ್ಚಿನ ಸಮಯ ಯಾರೊಟ್ಟಿಗೂ ಮಾತಾಡುವುದಿಲ್ಲ, ವರ್ಷಕ್ಕೆ ಕೆಲವು ದಿನವಾದರೂ ಮೌನ ವ್ರತ ಮಾಡುತ್ತಾರೆ. ಹಾಗೆ ಮಾಡುವುದರಿಂದಲೇ ಏನೋ ಅವರ ಮಾತುಗಳಿಗಾಗಿ ಜನ ಕಾದು ಕೂರುತ್ತಾರೆ. ಪ್ರತಿ ಮಾತನ್ನೂ ಗೌರವಿಸುತ್ತಾರೆ. ನನಗೆ ವೈಯಕ್ತಿಕವಾಗಿ ಮೌನ ಮತ್ತು ನಿಶ್ಶಬ್ದ – ಇವೆರಡೂ ಸ್ವಲ್ಪವೂ ಹಿಡಿಸದ ಪದಗಳು. ನಾನು ಹಾಸ್ಟೆಲ್’ನಲ್ಲಿದ್ದಾಗ 50-100 ವಿದ್ಯಾರ್ಥಿಗಳನ್ನು 3-4 ಮೇಲ್ವಿಚಾರಕ ಶಿಕ್ಷಕರೊಡನೆ ಒಂದೇ ದೊಡ್ಡ ಕೋಣೆಯಲ್ಲಿ ಕೂರಿಸಿ, ಒಂದೂ ಶಬ್ದ ಹೊರಬರದಂತೆ ಓದಿಸುತ್ತಿದ್ದರು. ನನಗೇನೋ ಶಾಂತಿಯ ವಾತಾವರಣದಲ್ಲಿ ಓದುವುದು ಇಷ್ಟವೆ; ಆದರೆ ಈ pin drop silence ಅಥವಾ ಸ್ಮಶಾನ ಮೌನ ಅಂತಾರಲ್ಲ, ಅದನ್ನು ಮಾತ್ರ ಕಂಡರೆ ಆಗಲ್ಲ. ತುಂಬಾ ಜನರಿರುವ ಜಾಗ ಸ್ವಲ್ಪ ಗುಜು-ಗುಜು ಅನ್ನುತ್ತಿದ್ದರೇನೆ ಚೆಂದ ಅನ್ನುವುದು ನನ್ನ ಭಾವನೆ.

ನಿಮಗೆ ಒಂದಿಷ್ಟು ಮೌನದ ಸನ್ನಿವೇಶಗಳನ್ನು ಹೇಳುತ್ತೇನೆ: ನೀವೆಲ್ಲರೂ ಅದನ್ನು ಅನುಭವಿಸಿರಬಹುದು. ನಿತ್ಯ ನೀವು ಮನೆಗೆ ಬಂದೊಡನೆ ನಿಮ್ಮೊಡನೆ ಹರುಟುವ ನಿಮ್ಮಮ್ಮ ಒಂದೆರಡು ದಿನದ ಮಟ್ಟಿಗೆ ಎಲ್ಲಾದರೂ ಹೋದರೆ, ಮನೆಯ ಬೀಗವನ್ನು ತೆರೆದು ಒಳಗೆ ಬರುವಾಗ ನಿಮ್ಮೊಳಗೆ ಸೇರುವ ಆ ಮೌನ ಒಬ್ಬರೇ ಕಾಫೀ ಮಾಡಿ ಕೂಡಿದರೂ ಹೋಗುವುದಿಲ್ಲ. ಹಾಸ್ಟೆಲ್ನಲ್ಲಿ ಇರುವ ಎಲ್ಲ ಹುಡುಗರು ಶಾಲೆಗೆ ಹೋದಮೇಲೆ, ಅನಾರೋಗ್ಯದಿಂದ ನೀವೊಬ್ಬರೆ ರೂಮಿನಲ್ಲಿದ್ದಾಗ ಅನುಭವಿಸುವ ಮೌನ ಆ ಭಯಮಿಶ್ರಿತ ಮೌನ ಅನಾರೋಗ್ಯಕ್ಕಿಂತಲೂ ಗಂಭೀರವಾಗಿ ತೋರುತ್ತದೆ. ಆಫೀಸಿನ ಯಾವುದೋ ಒಂದು ತಲೆನೋವನ್ನು ಹೊತ್ತು ಮನೆಗೆ ಬಂದಿರುತ್ತೀರಿ, ಷೂ ಬಿಚ್ಚುವ ಮೊದಲೇ ಹೆಂಡತಿ ಬಂದು “ಹಾಲು ತರಕಾರಿ ತರೋದಕ್ಕೆ ಹೇಳಿದ್ದೆ, ಖಾಲಿ ಕೈಯಲ್ಲಿ ಬಂದಿದಿರಲ್ಲ, ಒಂದು ಕೆಲಸಾನೂ ಮಾಡಲ್ಲ” ಅಂತ ಹೇಳುವ ಮಾತು ನಿಮ್ಮ ಸಿಟ್ಟನ್ನು ಕೆಣಕಿ ಅವಳ ಮೇಲೆ ರೇಗುವುದಕ್ಕೆ ಸಾಕಾಗಿರುತ್ತದೆ. ಆಗ ಶುರುವಾಗುತ್ತದೆ ನೋಡಿ ಆ ಪುಟ್ಟ ಮನೆಯಲ್ಲಿ ಮೌನ. ಮನೆಯಲ್ಲಿರುವುದು ಇಬ್ಬರೇ; ಒಬ್ಬರ ಮುಖ ಒಬ್ಬರು ನೋಡದೆ ವಿಧಿಯಿಲ್ಲ. ಆದರೂ ‘ನಾನೇಕೆ ಮೊದಲು ಮಾತಾಡಿಸಬೇಕು?’ ಎಂಬ ಅಹಂಕಾರ ಉಂಟು ಮಾಡುವ ಆ ಮೌನದ ಹರಿತ ಅನುಭವಿಸಿದವನಿಗೇ ಗೊತ್ತು.

ಮೌನ ಯಾವಾಗಲೂ ದುಃಖ ದ ಜೊತೆಗೇ ಅಂಟಿಕೊಂಡಿರುತ್ತದೆ ಅಂತೇನೂ ಅಲ್ಲ. ಯಾವುದೋ ನೆಂಟರ ಮದುವೆಗೆ ಹೋಗಿರುತ್ತೀರಿ, ಅಲ್ಲಿರುವವೆರೆಲ್ಲ ನಿಮ್ಮೊಟ್ಟಿಗೆ ರೇಜಿಗೆ ಹುಟ್ಟುವಷ್ಟು ಅನವಶ್ಯಕ ವಿಷಯಗಳ ಕುರಿತು ಮಾತನಾಡಿರುತ್ತಾರೆ. ಅಲ್ಲಿಂದ ಹೊರಬಂದು ನಿಮ್ಮ ಕಾರನ್ನು ಹೊಕ್ಕು AC ಆನ್ ಮಾಡಿ ಕಣ್ಮುಚ್ಚಿ ಒಂದೆರಡು ಕ್ಷಣ ಕೂತರೆ ಸಿಗುವುದು ಅದೇ ಮೌನ. ಆದರೆ ಮನಸ್ಸು ಈ ಮೌನವನ್ನ ಬಯಸುತ್ತಿರುತ್ತದೆ. ಸ್ವಲ್ಪ ಹೊತ್ತಿನ ನಂತರ ಕಣ್ತೆರೆದಾಗ ಹಾಯ್ ಎನ್ನಿಸುತ್ತದೆ. ಒಂದು ದಿನ ಬೆಳಗಿನ ಜಾವ ಬೇಗ ಎಚ್ಚರವಾದಾಗ ನಿಮ್ಮ ಗಾಡಿಯನ್ನು ಎತ್ತಿಕೊಂಡು ಸುಮ್ಮನೆ ಒಂದು ಲಾಂಗ್ ರೈಡ್ ಹೋಗುತ್ತೀರಿ, ಆಗಲೂ ನಿಮ್ಮೊಳಗೆ ಜಾಗ್ರತವಾಗಿರುವುದು ಮೌನವೇ. ಆದರೆ ಅದು ಹಿತವಾಗಿರುತ್ತದೆ ಅಷ್ಟೇ. ಇಬ್ಬರು ಚಿಕ್ಕ ಹುಡುಗರು ನೀವು ಅಣ್ಣ ತಮ್ಮ ಆಡಿದಂತೆ ಕಾರಣವೇ ಇಲ್ಲದ ಕಾರಣಕ್ಕೆ ಜಗಳ ಮಾಡುತ್ತಿದ್ದಾರೆ ಆಂದುಕೊಳ್ಳಿ, ಅವರನ್ನು ನೋಡುತ್ತಾ ಮೈ ಮರೆತು ನೀವು ನಿಮ್ಮ ಬಾಲ್ಯವನ್ನು ನೆನಪಿಸಿಕೊಂಡರೆ ಉಂಟಾಗುವ ಆ ಅನುಭವ ಎಷ್ಟು ಹಿತವಲ್ಲವೇ? ಒಂದು ಅನುಭವವನ್ನು ಮೆಲಕು ಹಾಕುವುದಕ್ಕೆ ಮೌನಕ್ಕೆ ಸರಿಸಮನಾದ ಭಾವ ಮತ್ತೊಂದಿಲ್ಲ.

ಹೀಗೆ ಹೇಳುತ್ತಾ ಹೋದರೆ ಮೌನದ ಮಾತಿಗೆ ನೂರಾರು ಸನ್ನಿವೇಶಗಳನ್ನು ಉದಾಹರಿಸಬಹುದು, ಎಲ್ಲವೂ ಎಲ್ಲರ ಅನುಭವಕ್ಕೆ ಬಂದಿರಬಹುದು ಅಥವಾ ಬಾರದೆಯೂ ಇರಬಹುದು. ಮಾತಿಗೆ ಕಾರಣಗಳು ಕಮ್ಮಿ, ಮೌನಕ್ಕೆ ಹಾಗಲ್ಲ. ಒಂದೊಂದು ಭಾವಕ್ಕೂ ಒಂದೊಂದು ರೀತಿಯ ಮೌನ. ನಿಮ್ಮ ಮನಸ್ಸಿನ ಆಳದಲ್ಲಿ ಒಮ್ಮೆ ಕಣ್ಣಾಡಿಸಿ ನೋಡಿ, ಯಾವುದಾದರೂ ಮೌನದ ನೆನಪು ಸಿಕ್ಕರೂ ಸಿಗಬಹುದು. ಸಮಯವಿದ್ದರೆ ಅದನ್ನು ಕಾಮೆಂಟ್ ಮಾಡಿ, ಬೇರೊಬ್ಬರ ಮೌನದ ಹುಡುಕಾಟಕ್ಕೆ ಅದು ಸಹಾಯವಾದರೂ ಆಗಬಹುದು.

Home Forums ಮೌನದ ಮಾತು

This topic contains 0 replies, has 1 voice, and was last updated by  Vasanth Bhat 6 months, 3 weeks ago.

You must be logged in to reply to this topic.