ಹತ್ತನೆಯ ತರಗತಿಯನ್ನು ಮುಗಿಸಿ, ಕಾಲೇಜಿಗೆ ಹೋಗುತ್ತಿರುವ ಮಕ್ಕಳನ್ನುದ್ದೇಶಿಸಿ ಭಾಷಣ ಮಾಡುವ ಪ್ರಸಂಗ ಒದಗಿ ಬಂತು. ಜೀವನದ ಪ್ರಶ್ನೆಗಳಿಗೆ ಉತ್ತರಗಳ ಸಹಾಯ ಮಾಡಿದ ಪೂಜ್ಯ ಮಂಕುತಿಮ್ಮನ ಕಗ್ಗವು ಭಾಷಣಕ್ಕೂ ನೆರವಾಗಿ ಬಂತು. ನನ್ನ ಅತ್ಯಂತ ಪ್ರಿಯವಾದ ಕಗ್ಗವೊಂದನ್ನೇ ವಿವರಿಸುವ, ವ್ಯಾಖ್ಯಾನಿಸುವ ಸಾಹಸವನ್ನು ನಮ್ಮ ಇಂಗ್ಲೀಷ್ ಮಾಧ್ಯಮದ ಮಕ್ಕಳ ಮುಂದೆ ನಾನು ಮಾಡಿದೆ. ಎಷ್ಟರ ಮಟ್ಟಿಗೆ ಈ ಸಾಹಸವು ಸಾರ್ಥಕವಾಗುವುದೋ ಗೊತ್ತಿಲ್ಲ. ಆ ಭಾಷಣಕ್ಕೆ ಮಾಡಿಕೊಂಡ ಸಿದ್ಧತೆಯ ಪ್ರಬಂಧವು ಇಂತಿದೆ.

ಇರುವ ಕೆಲಸವ ಮಾಡು

ವೃತ್ತಿಯೋ, ಪ್ರವೃತ್ತಿಯೋ, ಉಪವೃತ್ತಿಯೋ, ಅಥವಾ ಖಾಸಗಿ ಬದುಕೋ – ಸಹಜವಾಗಿ ನಮ್ಮ ಪಾಲಿಗಿರುವ ಕರ್ತವ್ಯಗಳು ಒಂದೆಡೆಯಾದರೆ, ನಾವೇ ಆರಿಸಿಕೊಂಡಿರುವ ಕೆಲಸಗಳು ಇನ್ನೊಂದೆಡೆಯಿರುತ್ತೆ. ವಿದ್ಯಾರ್ಥಿ ದೆಸೆಯಲ್ಲಂತೂ ಅನಿವಾರ್ಯತೆಯ ನೆರಳಿನಲ್ಲೇ ಕರ್ತವ್ಯವು ಮನೆ ಮಾಡಿಕೊಂಡಿರುತ್ತೆ. ಈ ನಮ್ಮ  ಕೆಲಸಗಳನ್ನು – ನಮಗಿರುವ ಕೆಲಸಗಳನ್ನು ಶ್ರದ್ಧೆಯಿಂದ ಮಾಡುವುದಾದರೂ ಹೇಗೆ? ಆ ಕರ್ತವ್ಯಗಳನ್ನು ತೊಡಕುಗಳಿಲ್ಲದೇ ನಿಭಾಯಿಸುವುದಾದರೂ ಹೇಗೆ? ಮೊದಲಿಗೆ ನಾವು ಮಾಡುತ್ತಿರುವ ಕೆಲಸದ ಮೇಲೆ ನಮಗೆ ಪ್ರೀತಿಯಿರಬೇಕು, ಗೌರವವಿರಬೇಕು. ಸರ್ಕಾರಿ ಕಚೇರಿಗಳ ಮುಂದೇನೋ ಬೋರ್ಡು ಕಾಣಿಸುತ್ತೆ – “ಸರ್ಕಾರಿ ಕೆಲಸ – ದೇವರ ಕೆಲಸ” ಎಂದು, ಆದರೆ ಪ್ರತಿ ಕೆಲಸವೂ ದೇವರ ಕೆಲಸವೆಂಬ ಭಾವನೆ ಬಾರದ ಹೊರತು ಆ ಕೆಲಸವು ಹಿರಿತನದಿಂದ ಕೂಡಿರಲಾರದು. ಕಾಯಕವೇ ಕೈಲಾಸವೆಂದು ಬಸವಣ್ಣನವರು ಹೇಳಿರುವುದನ್ನು ಹೀಗೆ ಅರ್ಥ ಮಾಡಿಕೊಳ್ಳಬಹುದಷ್ಟೆ?

ಯಾವ ಕೆಲಸವೂ ಕಿರಿಯ ಕೆಲಸವಲ್ಲ – ಅದರಿಂದ ಯಾರಿಗೂ ತೊಂದರೆಯಾಗದೇ ಇದ್ದರೆ. ನಮ್ಮ ಜನರ ಮನಸ್ಸಿನಲ್ಲಿ ಈ ಮೇಲು-ಕೀಳು ಕೆಲಸಗಳೆಂಬ ಭಾವನೆಯು ಬದಲಾಗಲು ಇನ್ನೂ ಸಮಯ ತೆಗೆದುಕೊಳ್ಳಬಹುದು; ಆದರೆ ಒಳ್ಳೆಯ ವಿಷಯವೆಂದರೆ, ಬದಲಾವಣೆಯ ಹಾದಿಯಲ್ಲಿ ಹೆಜ್ಜೆಯನ್ನಿಡುತ್ತಿದ್ದೇವೆ.

ಈ “ಇರುವ ಕೆಲಸ”ವೇ ಸ್ವಧರ್ಮ. ಶಾಲೆಯಲ್ಲಿ ಮೇಷ್ಟ್ರಾದ ನಾನು, ವೈದ್ಯರು ಹಣವನ್ನು ಹೆಚ್ಚು ಸಂಪಾದಿಸುತ್ತಿದ್ದಾರೆಂದು, ಆ ಹಾದಿಯನ್ನು ಹಿಡಿಯಲಾಗುವುದೇ? ಹಾಗೆ ಹಿಡಿದರೆ ನನ್ನ ವೃತ್ತಿಗೂ ಕೆಡುಕು ಮಾಡಿದಂತೆ, ಆ ವೃತ್ತಿಗೂ ಕೆಡಕು ಮಾಡಿದಂತೆ. ವಿದ್ಯಾರ್ಥಿಯೊಬ್ಬನು ಓದುವುದು/ಅಧ್ಯಯನ ಮಾಡುವುದು ಅವನ “ಇರುವ ಕೆಲಸ”, ಸ್ವಧರ್ಮ. ಬೇರೆ ಬೇರೆ ಚಾಂಚಲ್ಯಗಳು ಪರಧರ್ಮ! ಸ್ವಧರ್ಮೇ ನಿಧನಮ್ ಶ್ರೇಯಃ, ಪರಧರ್ಮೋ ಭಯಾವಹಃ.

ಇದನ್ನೇ ಅಲ್ಲವೇ ಶ್ರುತಿಯಲ್ಲಿ ನಮಗಿರುವ ಕೆಲಸವನ್ನು ಮಾಡಲು ನೂರು ವರ್ಷಗಳು ಬದುಕಲು ಇಚ್ಛೆ ಪಡಬೇಕೆಂದು ಹೇಳುವುದು? ಕುರ್ವನ್ನೇವೇಹ ಕರ್ಮಾಣಿ ಜಿಜೀವಿಷೇತ್ -ಶತಮ್ ಸಮಾಃ.

ದೇವರ ಕೆಲಸ ಮಾಡಿದ ಮೇಲೆ ಪ್ರಸಾದ ಸಿಗದೇ ಇರುತ್ತದೆಯೇ? ಯೋಗ್ಯತೆಗೆ ತಕ್ಕ ಹಾಗೆ, ಕೆಲಸದಲ್ಲಿ ಎಷ್ಟು ಮನವಿಟ್ಟು ಮಾಡಿರುತ್ತೇವೆಯೋ ಅದಕ್ಕೆ ತಕ್ಕ ಹಾಗೆ, ಕಷ್ಟಕ್ಕೆ ತಕ್ಕ ಹಾಗೆ, ಪ್ರತಿಫಲ ಸಿಕ್ಕೇ ಸಿಗುತ್ತೆ. ಅದೇನು ಸಿಗುತ್ತೋ ಅದು ಪ್ರಸಾದ! “ಅಯ್ಯೋ, ಇಷ್ಟೇನಾ?” ಎಂದು ಅತೃಪ್ತಿಯಿಂದ ಗೊಣಗಾಡಿದರೆ ಸಿಕ್ಕಿರುವ ಫಲವೂ ದಕ್ಕದೆ ಹೋದೀತು. ಊಟ ಮಾಡುವಾಗ ಅನೇಕರು “ಅದು ಸರಿ ಇಲ್ಲ, ಇದು ಸಾಲದು” ಎಂದು ಕೊರತೆಗಳನ್ನು ಹುಡುಕಾಡುತ್ತ, ಗೊಣಗಾಡುವುದನ್ನು ನೋಡುತ್ತಿರುತ್ತೇವೆ. ಅಂಥವರಿಗೆ ಊಟವು ಮೈಗೆ ದಕ್ಕುವುದಾದರೂ ಹೇಗೆ?

ಇಲ್ಲಿ ಇನ್ನೊಂದು ಅಂಶವನ್ನು ನಾವು ಗಮನಿಸಬೇಕು. ಏನು ದೊರಕುತ್ತೋ ಅದನ್ನು ಪ್ರಸಾದವೆಂದು ಕಣ್ಣಿಗೊತ್ತಿಕೊಂಡು ತಿನ್ನಬೇಕು ಎಂದಷ್ಟೇ ಈ ಸಾಲಿನ ಅರ್ಥವೆಂದು ನಾವು ಭಾವಿಸಬಾರದು.

ಪ್ರಸಾದವನ್ನು ನಾವು ಹೇಗೆ ತಿನ್ನುತ್ತೇವೆ? ಅಷ್ಟನ್ನೂ ಒಬ್ಬರೇ ತಿಂದು ಮುಗಿಸುವುದಿಲ್ಲ. ನಾಳೆಗೆ ಕೂಡಿಡುವುದಿಲ್ಲ. ’ನಮಗೆ’ ಎಂದು ಒಂದಷ್ಟು ತೆಗೆದುಕೊಂಡು ಮಿಕ್ಕಿದ್ದನ್ನು ಹಂಚುತ್ತೇವೆ. ನಮಗೆ ದೊರೆತಿರುವುದೆಲ್ಲವೂ ಪ್ರಸಾದ ಎಂಬ ಭಾವನೆ ನಮ್ಮ ಮನಸ್ಸಿಗೆ ಬಂದರೆ ನಮಗೆ ದಕ್ಕುವುದಷ್ಟನ್ನು ಮಾತ್ರ ನಾವು ಬಳಸಿಕೊಂಡು ಮಿಕ್ಕಿದ್ದರ ವ್ಯಾಮೋಹವನ್ನು ತೊರೆಯುತ್ತೇವೆ. ಅಜೀರ್ಣವಾಗುವಷ್ಟು ಹಣ ಕೂಡಿಟ್ಟುಕೊಳ್ಳುವುದಕ್ಕಿಂತ ಅದರ ಸದ್ವಿನಿಯೋಗ ನಡೆದರೆ – ಲೋಕದ ಭರವನ್ನು ಧರಿಸುವ ಕಾರ್ಯ ನಡೆದರೆ ಪ್ರಸಾದ ದೊರಕಿದ್ದಕ್ಕೂ ಸಾರ್ಥಕವಾದೀತು.

ಪ್ರತಿಯೊಬ್ಬರೂ ಲೋಕಕ್ಕೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆಯನ್ನು ನೀಡುತ್ತಿರುತ್ತಾರೆ. ಒಳ್ಳೆಯ ಕೊಡುಗೆಯನ್ನು ನೀಡುವುದು ನಮ್ಮ ಕರ್ತವ್ಯವಾಗಬೇಕು, ಕೆಟ್ಟ ಕೊಡುಗೆಯನ್ನಲ್ಲ. ಗಾಂಧೀಜಿಯು ಆದರ್ಶವಾಗಬೇಕೇ ಹೊರತು ಗೋಡ್ಸೆಯಲ್ಲ. ರಾಮನು ಆದರ್ಶನಾಗಬೇಕೇ ವಿನಾ ರಾವಣನಲ್ಲ. “Tiny drops make a mighty ocean” ಎಂಬ ಮಾತಿನ ಹಾಗೆ, ಲೋಕವೆಂಬ ಸಾಗರವನ್ನು ಭರಿಸುವ ಕಾರ್ಯದಲ್ಲಿ ನಾವು ಹನಿಗಳಂತೆ ಭಾಗಿಯಾಗಬೇಕು. ನಮ್ಮ ಕೃತಿಯು ಲೋಕಕ್ಕೆ ಒಳಿತಾಗುವಂತಿರಬೇಕು. ಒಳಿತಾಗದಿದ್ದರೂ ಕೆಡುಕಾಗಬಾರದು. ಒಳಿತನ್ನು ಯಾಕೆ ಮಾಡಬೇಕು? ಶಾಂತಿ ಮಂತ್ರಗಳಲ್ಲಿ “ಸರ್ವೇ ಭವಂತು ಸುಖಿನಃ…” ಎಂದೋ, “ಸರ್ವೇಷಾಂ ಸ್ವಸ್ತಿರ್ಭವತು…” ಎಂದೋ ಪ್ರಾರ್ಥಿಸುವುದು ಏತಕ್ಕೆ? ಎಲ್ಲರೂ ಆನಂದವಾಗಿರಲೆಂದು ಹಾರೈಸುವ ಕಂಪನಗಳನ್ನು ಲೋಕದುದ್ದಕ್ಕೂ ಹರಡುವುದಕ್ಕಲ್ಲವೇ? ಎಲ್ಲರೂ ಸುಖವನ್ನು ಮೀರಿದ, ಸಂತೋಷವನ್ನು ಮೀರಿದ, ಹಿತವನ್ನು ಮೀರಿದ ಆನಂದವನ್ನು ಹೊಂದಲು ಎಂದಲ್ಲವೇ? ಈ ಆನಂದಕ್ಕಾಗಿಯೇ ಅಲ್ಲವೇ ಲೋಕದ ಭರವನ್ನು ನಾವು ಧರಿಸಬೇಕಾದದ್ದು? ಅದು ಕೇವಲ ನಮ್ಮೊಬ್ಬರ ಆನಂದವಲ್ಲ. ಈ ಆನಂದವು ಪ್ರಸಾದವಿದ್ದಂತೆ. ಈ ಆನಂದವನ್ನು ಹೊಂದಿದವರು, ಪ್ರಸಾದವನ್ನು ಹಂಚುವ ರೀತಿ, ಉಳಿದವರಿಗೂ ಹಂಚಬೇಕಷ್ಟೆ? ಆನಂದವೇ ಪರಮಾರ್ಥವಷ್ಟೆ? (ಪರಮಾರ್ಥ = ಪರಮ + ಅರ್ಥ –> ಅರ್ಥ ಎಂದರೆ ಬೇಕಾಗಿರುವುದು, ಆಶಯ, seek ಎಂದು ಅರ್ಥ ಮಾಡಿಕೊಳ್ಳಬಹುದು)

ಶ್ರೀ ವಿನೋಬಾ ಭಾವೆಯವರು ತಮ್ಮ ಆತ್ಮಕಥನವಾದ Moved by Love ಪುಸ್ತಕದಲ್ಲಿ, ಮಹಾತ್ಮಾ ಗಾಂಧಿಯವರು ಆರಂಭಿಸಿದ “ದರಿದ್ರ ನಾರಾಯಣ” ಎಂಬ ಪರಿಕಲ್ಪನೆಯ ವಿವರಣೆ ನೀಡುತ್ತ, ತಮ್ಮ ದಿನಚರಿಯಲ್ಲಿ ಗ್ರಾಮ ಸ್ವಚ್ಛ ಕಾರ್ಯಕ್ರಮವೂ ಇದ್ದು, ಆ ಕಾಲದಲ್ಲಿ ಶೂದ್ರರಿಂದ ಮಾಡಿಸುತ್ತಿದ್ದ ಕೆಲಸವನ್ನು ಗಾಂಧೀಜಿ, ವಿನೋಬಾ ಮುಂತಾದವರು ಹೇಗೆ ಪೂಜ್ಯ ಭಾವನೆಯಿಂದ ಮಾಡುತ್ತಿದ್ದರೆಂಬುದನ್ನು ಹೇಳುತ್ತಾರೆ. ಆ ಹಳ್ಳಿಯ ಜನರ ಪಾಯಿಖಾನೆಯನ್ನು ತಾವು ಸ್ವಚ್ಛ ಮಾಡುವ ಕೆಲಸವೂ ಸಹ ದೇವರ ಕೆಲಸವೆಂದು, ಮತ್ತು ಆ ಕೆಲಸವನ್ನು ಆನಂದದಿಂದ ಮಾಡುತ್ತಿದ್ದೆವೆಂದು ವಿನೋಬಾ ಅವರು ಹೇಳುವುದನ್ನು ಇಲ್ಲಿ ನೆನಪಿಸಿಕೊಳ್ಳಬೇಕಿದೆ. ಆನಂದವೇ ಅವರ ಆಶಯವಾಗಿತ್ತು. ಆನಂದವೇ ಅವರ ಪರಮ ಅರ್ಥವಾಗಿತ್ತು.

ನಮ್ಮ “ಇರುವ ಕೆಲಸವನ್ನು” ನಾವು ಮನವಿಟ್ಟು, ಕಿರಿದೆನದೆ ಮಾಡಿದಾಗ, ದೊರೆತ ಪ್ರಸಾದವನ್ನು ಎಲ್ಲರೊಡನೆ ಹಂಚಿಕೊಂಡು ತಿಂದಾಗ, ಲೋಕದ ಭರವನ್ನು ಧರಿಸುವ ಮನೋಧರ್ಮವನ್ನು ಹೊಂದಿದಾಗ, ಆನಂದದ ಅರ್ಥವನ್ನು ಬಿಡದೆ ಹೊಂದಿಸಿಕೊಂಡಿದ್ದಾಗ – ಎಲ್ಲೂ ಅಂಟಿಕೊಂಡು ಬದುಕುವ ಪ್ರಮೇಯ ಬರುವುದಿಲ್ಲ. ಪ್ರೀತಿಯಿರುತ್ತೆ, ಮೋಹವಿರುವುದಿಲ್ಲ. ಕರ್ತವ್ಯ ಪ್ರಜ್ಞೆಯಿರುತ್ತೆ, ಆದರೆ ವೈರಾಗ್ಯವಿರುತ್ತೆ. ವೈರಾಗ್ಯವೆಂದರೆ “ಅಯ್ಯೋ, ನನಗೆ ಯಾವುದೂ ಬೇಡ” ಎಂದು ಕರ್ತವ್ಯ ವಿಮುಖರಾಗಿ ಹೋಗುವುದಲ್ಲ. ಯಾವುದಕ್ಕೂ ಅಂಟಿಕೊಳ್ಳದೇ, ಪ್ರೀತಿಯಿಂದ, ಇರುವ ಕೆಲಸವನ್ನು ಮಾಡುವುದು.

ಗೆಳೆಯ ಶ್ರೀರಾಘವನ್ (ವಿಜ್ಞಾನಿ) ಅವರು ತಮ್ಮ ಒಂದು ಉಪನ್ಯಾಸದಲ್ಲಿ ಅಂಟಿಕೊಳ್ಳುವ ಸ್ವಭಾವದ ಬಗ್ಗೆ ಮಾತನಾಡುತ್ತ, ಅಕ್ಬರ್-ಬೀರಬಲ್ಲನ ಕಥೆಯನ್ನು ಹೇಳಿದರು. ಆ ಕಥೆಯನ್ನು ಇಲ್ಲಿ ನೆನಪಿಸಿಕೊಳ್ಳುವುದು ಪ್ರಸ್ತುತವೆಂದು ನನಗನ್ನಿಸುತ್ತೆ. ಅನಾರ್ಕಲಿಯ ಮರಣದ ನಂತರ ಸಲೀಮನು ಕುಡುಕನಾಗುತ್ತಾನೆ. ಕುಡಿತದ ವ್ಯಸನದಿಂದ ತನ್ನ “ಇರುವ ಕೆಲಸ”ವನ್ನು ಮರೆಯುತ್ತಾನೆ. ಕತ್ತಲ ಕೋಣೆಯಲ್ಲಿ ಕಾಲ ಕಳೆಯುತ್ತಿರುತ್ತಾನೆ. ಅಕ್ಬರನಿಗೆ ಮಗನ ಚಿಂತೆ. ಬೀರಬಲ್ಲನನ್ನು ಕೇಳಿಕೊಳ್ಳುತ್ತಾನೆ, ಸಲೀಮನಿಗೆ ಬುದ್ಧಿ ಹೇಳಲು. ಯುವರಾಜನ ಕೆಲಸವನ್ನು ಹೇಗೆ ತಿಳಿಹೇಳುವುದೆಂದು ಬೀರಬಲ್ಲನು ಯೋಚಿಸಿ, ಸಲೀಮನು ಇಲ್ಲದ ವೇಳೆಯಲ್ಲಿ ಅವನ ಕೋಣೆಯನ್ನು ಹೊಕ್ಕು ಅಲ್ಲಿದ್ದ ಒಂದು ಕಂಬವನ್ನು ತಬ್ಬಿಕೊಂಡು ನಿಂತುಕೊಳ್ಳುತ್ತಾನೆ. ಹೆಂಡದ ಮತ್ತಿನಲ್ಲಿದ್ದ ಸಲೀಮನು ಕೋಣೆಗೆ ಹಿಂತಿರುಗಿದಾಗ ಕಂಬವನ್ನು ತಬ್ಬಿಕೊಂಡು ನಿಂತಿದ್ದ ಬೀರಬಲ್ಲನನ್ನು “ಏನು ಮಾಡುತ್ತಿದ್ದೀಯ, ಹೋಗು ನಿನ್ನ ಮನೆಗೆ” ಎಂದು ಗದರುತ್ತಾನೆ. ಅದಕ್ಕೆ ಬೀರಬಲ್ಲನು, “ನಾನೇನು ಮಾಡಲಿ, ಈ ಕಂಬ ನನ್ನನ್ನು ಬಿಡುತ್ತಿಲ್ಲ!” ಎನ್ನುತ್ತಾನೆ. ಬುದ್ಧಿಶಾಲಿಯಾಗಿದ್ದ ಸಲೀಮನಿಗೆ ಇಷ್ಟು ಪಾಠ ಸಾಕಾಯಿತು, ತನ್ನ “ಇರುವ ಕೆಲಸ”ದ ಅರಿವಾಗಲು, ತಾನು ಅಂಟಿಕೊಂಡಿದ್ದ ವಿಷಯದ ಬಗ್ಗೆ ತನಗೆ ತಿಳಿವಾಗಲು.

ಅಂಟಿಕೊಂಡಿದ್ದಾಗ ಬಿಟ್ಟು ಹೋಗುವುದು ಕಷ್ಟವಾಗುತ್ತೆ, ಹಿಂಸೆಯಾಗುತ್ತೆ, ನೋವಾಗುತ್ತೆ, ಅಳು ಬರುತ್ತೆ. ವಿರಾಗವನ್ನು ರೂಢಿಸಿಕೊಂಡವನಿಗೆ ಕರ್ತವ್ಯವು ಮುಖ್ಯವಾಗಿರುತ್ತೆ, ಅಂಟಿಕೊಂಡಿರುವ ವಸ್ತುವಲ್ಲ; ಲೋಕದ ಭರವನ್ನು ಧರಿಸುವ ಪ್ರೀತಿಯು ಮುಖ್ಯವಾಗಿರುತ್ತೆ, ಲೌಕಿಕ ಮೋಹವಲ್ಲ; ಪರಮಾರ್ಥದ ಗುರಿಯು ಮುಖ್ಯವಾಗಿರುತ್ತೆ, ಅನರ್ಥ ಸುಳಿಗಳಲ್ಲ. ಅಂಥವನು ಏನನ್ನು ಬೇಕಾದರೂ ಬಿಟ್ಟು ಹೋಗಬಲ್ಲ. ಆಲ್ಪರ್ಟ್ ಐನ್ಸ್ಟೈನರು “If you want to live a happy life, tie it to a goal, not to people or objects!” ಎನ್ನುತ್ತಾರೆ. ಅದನ್ನೇ ಇನ್ನೊಂದು ರೀತಿಯಲ್ಲಿ, ಬಹಳ ಹಿಂದೆಯೇ ಶ್ರೀ ಶಂಕರಾಚಾರ್ಯರು “ಕಸ್ಯ ಸುಖಮ್ ನ ಕರೋತಿ ವಿರಾಗಃ” ಎಂದು ಹೇಳಿದ್ದಾರೆ! ಇದನ್ನು ರೂಢಿಸಿಕೊಂಡವನು ಏನನ್ನಾದರೂ ಬಿಟ್ಟು ಹೋಗಬೇಕಾದರೆ – ಶಾಲೆಯಲ್ಲಿ ಉತ್ತೀರ್ಣರಾಗಿ ಮುಂದಿನ ಓದಿಗೆ ಬೇರೆ ಶಾಲೆಗೆ ಹೋಗುವಾಗಲೋ; ಮದುವೆಯಾದ ಹೆಣ್ಣು ಮಗಳು ತವರು ಮನೆಯನ್ನು ಬಿಟ್ಟು ಗಂಡನ ಮನೆಗೆ ಹೋಗುವಾಗಲೋ; ಕೆಲಸದ ಭರಾಟೆಯಲ್ಲಿ ಗೆಳೆಯರ ಸಂಗಡವನ್ನು ತೊರೆಯುವಂತಾಗುವಾಗಲೋ; ವೃತ್ತಿ ನಿರ್ವಹಿಸುತ್ತಿದ್ದ ಕಚೇರಿಯಲ್ಲಿ ನಿವೃತ್ತವಾದಾಗಲೋ; ಕಡೆಗೆ ಆಯುಷ್ಯ ಮುಗಿದು ಈ ಜಗತ್ತಿನಿಂದ ಹೊರಟುಬಿಡುವ ಕರೆಯು ಬಂದಾಗಲೂ ಸಹ “ನಾನು ಹೋಗಲಾರೆ” ಎಂದು ಅಳುವುದಿಲ್ಲ. ಹೀಗಲ್ಲವೇ ನಾವು ಬದುಕಬೇಕಾದದ್ದು?

ಇರುವ ಕೆಲಸವ ಮಾಡು ಕಿರಿದೆನದೆ ಮನವಿಟ್ಟು|
ದೊರೆತುದ ಹಸಾದವೆಂದುಣ್ಣು ಗೊಣಗಿಡದೆ||
ಧರಿಸು ಲೋಕದ ಭರವ ಪರಮಾರ್ಥವನು ಬಿಡದೆ|
ಹೊರಡು ಕರೆಬರಲಳದೆ ಮಂಕುತಿಮ್ಮ ||

-ಅ

 

Home Forums ಇರುವ ಕೆಲಸವ ಮಾಡು

This topic contains 0 replies, has 1 voice, and was last updated by  Arun Meshtru 5 months, 4 weeks ago.

You must be logged in to reply to this topic.