ನಿನ್ನ ನೆನಪು ಪ್ರತಿಕ್ಷಣ ಆದಾಗಲೂ ಏನೋ ಒಂದು ತರಹದ ನೆಮ್ಮದಿ. ಗೋಜಲು ಗೋಜಲಾದ ಜೀವನದಲ್ಲಿ ಅರೆಕ್ಷಣವಾದರೂ, ಬಿಡುವು ಮಾಡಿಕೊಂಡು ದಿನಕ್ಕೆ ಒಮ್ಮೆಯಾದರೂ ನಿನ್ನ ಬಳಿ ಸುಳಿಯದಿದ್ದರೆ ಏನೋ ಕಳೆದುಕೊಂಡ ಭಾವ.

ನಾ ನಿನ್ನ ಬಳಿಗೆ ಬರದಿದ್ದರೂ ನೀನೆ ಬಂದು ಬಿಡುವೆ ಒಮ್ಮೊಮ್ಮೆ. ಹಲವು ರೂಪಗಳಲ್ಲಿ, ಹಲವು ಬಣ್ಣಗಳಲ್ಲಿ, ಹಲವು ಮೂಲಗಳಲ್ಲಿ.
ನೀ ಪ್ರತಿಯೊಬ್ಬರ ಜೀವನದಲ್ಲಿಯೂ ಇರುವೆಯಾದರೂ ನನ್ನ ಜೀವನದಲ್ಲಿ ಅದ್ಭುತವಾಗಿ ಮೂಡಿ ಬಂದೆ. ನೀ ಮೂಡಿ ನನ್ನ ಮೂಡಿಸಿದೆ. ಮೂಡಿಸುತ್ತಾ ಬೆಳೆಸಿದೆ. ಬೆಳೆಸಿ ಮರೆಯಾದೆ. ಇಂದಿಗೂ ನಿನ್ನ ಬಳಿ ಮತ್ತೆ ಮತ್ತೆ ನಾ ಓಡಿ ಬರುವುದು ಅದೇ ಮೋಹಕ್ಕೆ, ಅದೇ ಸೆಳೆತಕ್ಕೆ, ಅದೇ ಕಾರಣಕ್ಕೆ.

ನಿನ್ನ ಅಂದಿನ ಆ ಹೊಳಪುಗಳನ್ನು ಇಂದು ನೀ ನನ್ನಲ್ಲಿ ಗುರುತಿಸಲಾರೆ. ಬಲವಂತವಾಗಿ ಬರಿಸಿಕೊಂಡರೂ, ಕಂಡವರು ‘ಇದೇನಿದು ಎಳಸು’ ಎಂದು ಮೂಗು ಮುರಿದು ನಕ್ಕಾರೆಂಬ ಅಳುಕು.

ಅಂಬೆಗಾಲಿಟ್ಟು ಹೊಸ್ತಿಲು ದಾಟಿ ದಾಟಿ ಆಚೆ ಹೋದಾಗಲೆಲ್ಲಾ ಅಮ್ಮ ಒಮೊಮ್ಮೆ ಖುಷಿ ಪಟ್ಟು ನಕ್ಕು, ಕೆಲವೊಮ್ಮೆ ಗದರಿ ಅತ್ತದ್ದು ನೆನಪಿದೆ. ಅಂಬೆಗಾಲಿನಲ್ಲಿ ಆಚೆ ಬಂದು ಅಕ್ಕ ಪಕ್ಕದವರ ಅಂಗಳದಲ್ಲಿ ಆಡುತ್ತಿದ್ದವರನ್ನು ಕಂಡು ನನ್ನೊಳಗೆ ಇದ್ದ ಆ ತುಂಟತನ ಆಚೆ ಬರಲು ಆರಂಭಿಸಿತು. ಅವರಲ್ಲಿ ಕೆಲವರು ಎತ್ತಿಕೊಂಡು ಮುತ್ತಿಟ್ಟಿದ್ದೂ ಇದೆ. ಮುತ್ತಿನ ಮತ್ತೂ ನೆನಪಿದೆ.

ಅಮ್ಮ ಮರೆಯಾದಾಗ ಜೇಬಿನಲ್ಲಿ ಬೆಲ್ಲ ತೂರಿಸಿಕೊಂಡು ಆಚೆ ಬಂದಿದ್ದು, ರಾತ್ರಿ ಮಲಗಿದಾಗ ಆ ಜೇಬಿಗೆ ಇರುವೆ ದಾಳಿಯಿಟ್ಟಿದ್ದು, ಅದನ್ನು ನೋಡಿ ಅಮ್ಮ ಬೆಳಗ್ಗೆ ನಾಲ್ಕು ಬಾರಿಸಿದ್ದು, ಹತ್ತಾರು ಕೀಟಲೆಗಳನ್ನು ತಡೆಯಲಾರದೆ ಆಕೆ ಶಾಲೆಗೆ ಹಾಕಿದ್ದು, ಪಕ್ಕದ ಮನೆ ಜ್ಯೋತಿ, ಸುಮರ ಜೊತೆ ಕೂತು ಉಪ್ಪಿಟ್ಟು ತಿಂದಿದ್ದು, ಇಂದಿಗೂ ಮರೆಯಲಾಗದ ಚಿಕ್ಕ ಚಿಕ್ಕ ಪದ್ಯಗಳನ್ನು ಕಲಿತ್ತಿದ್ದು, ಅವರಿವರ ಜಡೆ ಎಳೆದ, ಕಿವಿ ಹಿಂಡಿದ ಅನ್ನೋ ಕಾರಣಕ್ಕೆ ದೊಡ್ಡ ಶಾಲೆಗೆ ಸೇರಿಸಿದ್ದು, ಅಲ್ಲಿ ಮೇಷ್ಟ್ರುಗಳ ಬೆತ್ತದ ಸೇವೆ, ನೋಟ್ ಪುಸ್ತಕದ ಕೊನೆಯ ಪುಟದಲ್ಲಿ ಬರೆದ ಶಿವನ ಚಿತ್ರ, ಭಾನುವಾರಗಳಂದು ಗಾಳಿಪಟ ಹಿಡಿಯಲು ಮೋರಿ ಹಾರಿದ್ದು, ಹಾರಲೋಗೊಮ್ಮೆ ಗದ್ದ ಒಡೆದುಕೊಂಡಿದ್ದು, ಜಿರ್ಜಿಂಬೆ ಬೆಂಕಿಪೊಟ್ಟಣದಲ್ಲಿ ಮೊಟ್ಟೆಯಿಟ್ಟಾಗ ಆದ ಖುಷಿ, ಹರಿದ ಚಡ್ಡಿಯಲ್ಲೇ ಅದರ ಅರಿವು ಕೂಡ ಇಲ್ಲದೇ ರಸ್ತೆಯೆಲ್ಲಾ ಅಲೆದದ್ದು, ಜಾತಿಗಳಾವುವು, ಅಂತಸ್ತುಗಳಾವುವು ಎಂಬುದನ್ನು ಚಿಂತಿಸದೆ ಕೇವಲ ಖುಷಿಯನ್ನೇ ಬಂಡವಾಳ ಮಾಡಿಕೊಂಡು ಕುಣಿದಾಡಿದ್ದು, ಗೋಲಿ, ಬುಗುರಿ, ಮರಕೋತಿ ಒಂದೆರಡಲ್ಲದ ಆಟಗಳು ಅಬ್ಬಬ್ಬಾ! ಒಂದಾ, ಎರಡಾ ನಿನ್ನ ಲೀಲೆ.

ಅದ್ಯಾವ ಗಳಿಗೆಯಲ್ಲಿ ನೀನು ಮರೆಯಾಗುವ ಕ್ಷಣ ಬಂತೋ, ನನ್ನ ದನಿ ಒಡೆಯಿತು. ಮುಗಿನ ಕೆಳಗೆ ಮೀಸೆ ಮೂಡಿತು. ಪಕ್ಕದಲ್ಲಿ ಕೂತು ಉಪ್ಪಿಟ್ಟು ತಿಂದಿದ್ದ ಜ್ಯೋತಿಯ ಮೇಲೆ ಈಗ ಅದೇನೋ ಬೇರೆಯ ಸೆಳೆತ. ಚಂದದ ಬಟ್ಟೆ ಬೇಕು ಅನಿಸಿತ್ತು. ದೊಡ್ಡವನೆಂದು ತೋರಿಸಿಕೊಳ್ಳಬೇಕು ಅನಿಸಿತ್ತು. ನೀನು ಬಿಟ್ಟು ಹೋದ ಮೇಲೆ ನೆಮ್ಮದಿಯೇ ಇಲ್ಲ. ಬರೀ ಜಂಜಾಟ, ಬರೀ ಆಸೆಗಳು, ಬರೀ ದ್ವೇಷಗಳು, ಹೊಟ್ಟೆಕಿಚ್ಚುಗಳು, ನಾ ಮೇಲು, ನೀ ಕೀಳು ಅನ್ನುವ ಭಾವಗಳು, ಛೇ. ಸಾಕು ಎನಿಸಿದೆ ಜೀವನ. ಅದಕ್ಕೆಂದೆ ದಿನಾ ನಿನ್ನ ಬಳಿಗೆ ಬರುತ್ತೇನೆ. ಮತ್ತೆಮತ್ತೆ ಅದೇ ದಿನಗಳಿಗೆ ಮರುಳುವ ಆಸೆ ಪ್ರತಿ ಕ್ಷಣಕ್ಕೂ. ನಿನ್ನ ನೆನಪು ಮಾಡಿಕೊಂಡು ಖುಷಿಪಡುತ್ತೇನೆ. ನೆಮ್ಮದಿ ಪಡೆಯುತ್ತೇನೆ.

ಪದೇ ಪದೇ ನಿನ್ನ ನೆನಪುಗಳಲ್ಲೇ ನಾನು ಸಂಪೂರ್ಣವಾಗಿ ಮರೆತುಹೋಗುತ್ತಿದ್ದೆ. ಅದೆಷ್ಟು ಬರೆದು ಬರೆದು ಎಸೆದೆನು. ಮತ್ತೆ ಮಗುವಾಗಲು ಅದೆಷ್ಟು ಪ್ರಯತ್ನ ಪಟ್ಟೆನೋ ಗೊತ್ತಿಲ್ಲ. ಹಣ, ಆಸ್ತಿ, ಅಂತಸ್ತು, ಲಿಂಗಬೇಧ, ಜಾತಿ, ಒತ್ತಡಗಳು, ನಿಭಾಯಿಸಲಾಗದ ಜವಾಬ್ದಾರಿಗಳು, ಅರ್ಧ ಬದುಕಿರುವೆನೋ. ಬರೀ ಆಸೆಯ ಬೆನ್ನು ಹತ್ತಿ ಹೊರಟು ಬದುಕು, ಅದರ ನೆರಳಲ್ಲೇ ಬಿಚ್ಚಿಕೊಳ್ಳುವ ಹತಾಶೆ, ಎಲ್ಲದರಲ್ಲೂ ಎಲ್ಲರಲ್ಲೂ ಸ್ವಾರ್ಥ ಕಾಣುವ ಈ ಕಣ್ಣುಗಳು, ನೋಡುವವರ ಕಣ್ಣುಗಳಲ್ಲೂ ಅದೇ ಸ್ವಾರ್ಥದ ಬಿಂಬ – ಇವು ಈಗ ನನ್ನ ಆಳುತ್ತಿರುವ ಸಂಪತ್ತು. ಸದಾ ಚುಚ್ಚುವ ಸಂಪತ್ತು, ನೆಮ್ಮದಿ ಕಿತ್ತುಕೊಂಡ ಸಂಪತ್ತು. ನಾನು ಯಾಕಾದರೂ ಬಾಲ್ಯದಿಂದ ಬೆಳೆದು ದೊಡ್ಡವನಾದೆನೋ ಎಂದು ದೇವರಿಗೆ ಸಾವಿರ ಸಾರಿ ಶಾಪ ಹಾಕಿದ್ದೇನೆ. ಈ ವಿಜ್ಞಾನಿಗಳು ಬಾಲ್ಯದ ಬೆಳವಣಿಗೆಯನ್ನು ಬಾಲ್ಯದಲ್ಲೇ ಹಿಡಿದು ನಿಲ್ಲಿಸುವುದನ್ನು ಯಾಕೆ ಕಂಡುಹಿಡಿಯಲಿಲ್ಲವೆಂದು ಅವರಿಗೆ ಬೈದುಕೊಂಡಿದ್ದೇನೆ.

ನನ್ನದು ಹಾಳಾಗಿಹೋಯಿತು ಬಿಡಿ, ಹೇಗಾದರೂ ಬದುಕಿಕೊಂಡೆನೋ ನಾನು ಅಷ್ಟೋ ಇಷ್ಟೋ ಬಾಲ್ಯದ ಜೇನು ಸವಿದೆನು. ಆದರೆ ಈಗಿನ ಕಾಲದ ಮಕ್ಕಳನ್ನು ಕಂಡು ಕರುಳು ನೋಯುತ್ತದೆ. ಅವರಿಗೊಂದು ಬಾಲ್ಯವೇ ಇಲ್ಲ. ಹುಟ್ಟುವ ಮೊದಲೇ ಬಾಲ್ಯ ಕಸಿಯುವ ಹುನ್ನಾರ ಒಂದು ಅವರ ಪೋಷಕರಿಂದ ಸಿದ್ಧವಾಗಿರುತ್ತದೆ. ಹುಟ್ಟಿ ಮೂರೇ ದಿನಕ್ಕೆ ಬೇಬಿ ಸಿಟ್ಟಿಂಗ್‍’ಗೊಂದು ಅರ್ಜಿ ಎಸೆದು ಬಂದು ಬಿಡುತ್ತಾರೆ. ಬರೀ ದುಡ್ಡು ಮತ್ತು ಹೆಸರಿನ ಬೆನ್ನು ಹತ್ತಿ ಹೊರಟವರು ಇವರು. ನಮ್ಮ ಮಕ್ಕಳು ಸಾಧ್ಯವಾದಷ್ಟು ಮಟ್ಟಿಗೆ ದೊಡ್ಡ ಎಟಿಎಮ್ ಯಂತ್ರಗಳಾಗಬೇಕು ಎಂಬ ಆಸೆ. ಮತ್ತು ನಮ್ಮ ಹೆಸರನ್ನು ನಮ್ಮ ಮಕ್ಕಳು ಅಲ್ಲಲ್ಲಿ ಅರಳುವಂತೆ ಮಾಡಬೇಕು. ಮಕ್ಕಳು ದೊಡ್ಡವರ ಕನಸಿನ ಏಜೆಂಟ್‍’ಗಳಾಗುತ್ತಿದ್ದಾರೆ. ಕುದುರೆಗೆ ಮುಖವಾಡ ಕಟ್ಟಿದ ನಡುಗೆ ಅವರದು. ಅಪ್ಪ ಅಮ್ಮ ಗುರಿಯನ್ನು ಬಿಟ್ಟು ಬೇರೆ ಕಡೆ ನೋಡಿದರೆ ಅದನ್ನು ಪಾಪವೆಂದೇ ಬಿಂಬಿಸಲಾಗಿರುತ್ತದೆ.

ಅಷ್ಟೂ ಇಷ್ಟೂ ಮಕ್ಕಳೇ ಹಠ ಮಾಡಿದರೆ ಅವರಿಗೊಂದು ಕ್ರಿಕೆಟ್ ಬ್ಯಾಟ್, ಒಂದು ವಿಡಿಯೋ ಗೇಮ್ ಟೂಲ್, ಸಂಜೆಯಲ್ಲಿ ಪಾರ್ಕಿನಲ್ಲೊಂದು ವಾಕ್, ಮನೆಯಲ್ಲಿ ಕಾರ್ಟೂನ್ ಚಾನೆಲ್ ಇವು ಅಷ್ಟೇ ಅವರ ಬಾಲ್ಯ. ಅವರಿಗೆ ಮಳೆ ಗೊತ್ತಿಲ್ಲ, ಬೆಳೆ ಎಲ್ಲಿ ಬೆಳೆಯುತ್ತಾರೆ ಗೊತ್ತಿಲ್ಲ. ಹಾಲು ಎಲ್ಲಿ ಬರುತ್ತೆ ಗೊತ್ತಿಲ್ಲ. ನಗು ಗೊತ್ತಿಲ್ಲ. ಬಿದ್ದು ಮಂಡಿ ಕೆತ್ತಿಹೋಗಿದ್ದು ಗೊತ್ತಿಲ್ಲ. ಸದಾ ಗಂಭೀರ. ಯಾಂತ್ರಿಕ ಲುಕ್. ಇದು ಮೊದಲು ಕೇವಲ ನಗರಕ್ಕಷ್ಟೇ ಸೀಮಿತವೆಂದು ಭಾವಿಸಿದ್ದು. ಈಗ ಹಳ್ಳಿಗಳೂ ಹೊರತಲ್ಲ. ಅಲ್ಲಿಯ ಮಕ್ಕಳಿಗೂ ಬಾಲ್ಯವೇ ಸಿಗುತ್ತಿಲ್ಲ. ಸಿಟಿಯವರ ಗಾಳಿ ಬೀಸಿದೆ. ಬೀಸಿದೆ ಅಂದರೆ ತಪ್ಪಾದೀತು; ಬಂದು ಬಡಿದಿದೆ.

ಪ್ರಿಯ ಬಾಲ್ಯವೇ, ಮನುಷ್ಯ ಯಾವತ್ತಾದರೂ ಎಲ್ಲವನ್ನೂ ಮರೆತು ಏನೂ ಗೊತ್ತಿಲ್ಲದೇ ನೆಮ್ಮದಿಯಾಗಿದ್ದಾನೆ ಅಂದರೆ ಅದು ನಿನ್ನಲ್ಲಿ ಮಾತ್ರ. ಮುಂದೆ ಯಾವತ್ತೂ ಕೂಡ ಅವನಿಗೆ ನೀನು ಕೊಟ್ಟಂತಹ ಸುಖವನ್ನು, ಸಂತಸವನ್ನು ಯಾರೂ ಕೊಡಲಾರರು. ಯಾರೇ ಅಡ್ಡಹಾಕಿದರೂ ಮಗುವಿನ ಮನದಳೊಗೆ ಬಾ, ಬಾಲ್ಯವೇ. ಈಗಿನ ಕಾಲದ ಮಕ್ಕಳಿಗೆ ಒಂಚೂರು ಖುಷಿಕೊಡಲು ನೀನಲ್ಲದೆ ಇನ್ಯಾರು ದಿಕ್ಕು ಅವರಿಗೆ. ಬಲಿತು ಬೆಳೆದ ದೊಡ್ಡವರಿಗೂ ನೀನೆ ಔಷಧಿಯಾಗಬಲ್ಲೆ. ಆದರೆ ಅವರಿಗೆ ಅದು ಗೊತ್ತಿಲ್ಲ. ಮನುಷ್ಯ ಎಷ್ಟೇ ದೊಡ್ಡವನಾದರೂ ಮಗುವಿನಂತೆ ಇರಬೇಕು ಎಂಬ ಕವಿವಾಣಿ ಇದೇ ಅರ್ಥದಲ್ಲಿ ಹೇಳಿರುವಂತದ್ದು. ಬಾಲ್ಯದ ನೆನಪುಗಳನ್ನು ತಂದುಕೊಂಡು ಒಂದಷ್ಟು ಕಾಲ ಮಗುವಾಗಬೇಕು. ಸದ್ಯದ ಜಂಜಾಟವನ್ನು ಮರೀಬೇಕು. ಆಗ ನೋಡಿ ನಮ್ಮಲ್ಲಿ ಎಂತಹ ಬದಲಾವಣೆ ಕಂಡು ಬರುತ್ತದೆ. ನಿನ್ನ ಹೆಸರಿನಲ್ಲಿ ಸಂಘಗಳು ಕೂಡ ಹುಟ್ಟಿವೆ ನಿನಗೆ ಗೊತ್ತಾ? ನಗು ಬಂತಾ? ಸಂಘ ಕಟ್ಟಿಕೊಂಡು ಕೊಡುವಂತಹ ವಸ್ತುವಾದೇನೋ ನಾನು ಎಂದು ದುಃಖವಾಯಿತಾ? ‘ಬಚಪನ್ ಬಚಾವೊ’ ಅಂತ ದೊಡ್ಡ ಹೊರಾಟವೇ ಸಾಗಿದೆ. ಅವು ಮಾತ್ರ ಹೆಸರು ಮತ್ತು ಪ್ರಶಸ್ತಿ ಪಡೆದುಕೊಂಡಿವೆ. ಆದರೆ ಹುಟ್ಟುವ ಮಕ್ಕಳು ಮಾತ್ರ, ಹುಟ್ಟುತ್ತಲೇ ಸೀರಿಯಸ್ ಆದ ಬದುಕು ಆರಂಭಿಸಬೇಕು – ಬಾಲ್ಯವನ್ನು ಕಟ್ಟಿ ಅಟ್ಟದ ಮೇಲಿಟ್ಟು. ಎಂತಹ ಅನ್ಯಾಯ ಅಲ್ವಾ? ಯಾರು ಮಾಡಿದ ಪಾಪಕ್ಕಾಗಿ ಅವರಿಗೆ ಶಿಕ್ಷೆ, ಹೇಳು ಬಾಲ್ಯವೇ? ನೀನೆ ಇದಕ್ಕೆ ಉತ್ತರಿಸಬೇಕು ಅಲ್ಲವೇ?

ಈ ದಿನಗಳು ಸಾಕು, ಬಾ ಬಾಲ್ಯವೇ, ಮತ್ತೊಮ್ಮೆ ಬಾ, ಮತ್ತೊಮ್ಮೆ ನನ್ನ ಮಗುವಾಗಿಸು. ಮತ್ತೆ ಹರಿದ ಚಡ್ಡಿಯಲ್ಲಿ ಸುಡುವ ಬಿಸಿನಲ್ಲಿ ಸುತ್ತುವಾಗ ಹರಿದ ಬೆವರಿನಲ್ಲಿ ಕಂಡ ಆನಂದ ಇವತ್ತು ಹಾಸಿಗೆಯ ಮೇಲೂ ಸಿಗುತ್ತಿಲ್ಲ. ಯಾವ ಎ.ಸಿ ರೂಂ, ದೊಡ್ಡ ಮೊತ್ತದ ಸಂಬಳವೂ ಕೂಡ ಅದನ್ನು ಕೊಡಲಾರದು. ಬಾ ಬಾಲ್ಯವೇ ಮತ್ತೆ ಮಗುವಾಗಿಸು, ಎಲ್ಲವನ್ನು ಮರೆಸು, ಮರೆಸು ಬಾ ಬಾಲ್ಯವೇ.

Home Forums ಗಾಳಿಯ ನೆರಳು

This topic contains 0 replies, has 1 voice, and was last updated by  Sanjay Nagaraj 6 months, 2 weeks ago.

You must be logged in to reply to this topic.