ನಾವ್ ಆಗ್ಲೇ ಒಂತರ ರೆಬಲ್ ಸ್ಟಾರ್ ಅಭಿಮಾನಿ ಜೀವ್ನ ನಡ್ಸ್ದೋರು. ಕಾಲೇಜಲ್ಲಿ ಸ್ವಲ್ಪ ಒಳ್ಳೆ ಹುಡುಗ, ತುಂಬ ಕೆಟ್ಟ ಹುಡುಗ ಅನ್ನ್ಕೊಂಡಿದ್ದೇ ಜಾಸ್ತಿ ಇರ್ಬೇಕು. ಕ್ಲಾಸಿಗೆ ಬೇಗ ಹೋಗಿದ್ದ್ ದಾಖಲೇನೇ ಇಲ್ಲ ಬಿಡಿ. ಸೂರ್ಯ ಮುಖದ್ಮೇಲೆ‌ ನೃತ್ಯ ಮಾಡಿದ್ಮೇಲೇನೇ ಬೆಳಗಾಗ್ತಿದ್ದಿದ್ದು, ಆಮೇಲೆ ಅರ್ಧದಲ್ಲಿ ಅರ್ಧ ತಿಂದು, ಅಮ್ಮನ ಬೈಗುಳಗಳನ್ನೆಲ್ಲಾ ಆಶೀರ್ವಾದ ಅಂದ್ಕೊಂಡು ಬಸ್ ಹತ್ತಿದ್ರೆ ಮುಗೀತು. ಗೊತ್ತಲ್ವಾ – ಲೋಕಲ್ ಬಸ್ಗಳಲ್ಲಿ ಆಗೋ ಕಾಮನ್ ಅವಾಂತರ. ಹೋಗ್ಬೇಕಿರೋ ಸ್ಟಾಪ್ ತಲುಪುವವರೆಗೆ ಎಲ್ಲಾ ವಿಧದ ನೃತ್ಯ ಪ್ರಕಾರಗಳನ್ನ ಕುಂತಲ್ಲೆ ಮಾಡಿ ಮುಗಿಸಿರುತ್ತಿದ್ದೆ. ಮಳೆಗಾಲದಲ್ಲಿ ಸೋರುವ ನೀರಿಗೆ ನಂದು ಮಳೆ ಡಾನ್ಸ್ ಕೂಡ. ಯಾರಿಗಂತ ಬೈಯ್ಯೋದು.

ಕಂಡಕ್ಟರ್ ಜೊತೆ ದಿನಕ್ಕೆರಡು ಬಾರಿ ಜಗಳ ಆಡಿಲ್ಲ ಅಂದ್ರೆ ಬೆಳಿಗ್ಗೆ ತಿಂದಿರೋ ಪುಳಿಯೋಗರೆ, ಮಧ್ಯಾನ್ಹ ಹನುಮಾನ್ ಸ್ಟೋರ್ಸಲ್ಲಿ ತಿಂದಿರೋ ಪಪ್ಸ್ ಜೀರ್ಣ ಆಗಲ್ವೇನೋ ಅನ್ನೋ ಫೀಲಿಂಗು. ‘ಜೀವಕ್ಕೆ ಜೀವ ಬೇಕಾದ್ರು ಕೊಡ್ತೀನಿ ಲೋಕಲ್ ಬಸ್ಸಲ್ಲಿ ಸೀಟ್ ಹಿಡ್ಕೋ’ ಅನ್ನೋಕೊಬ್ಬ ಚಡ್ಡಿ ದೋಸ್ತ್. ಅವನೋ ಇಂಗ್ಲೀಷ್‌ ಜೊತೆ ಕನ್ನಡ ಸೇರಿಸಿ ಮಿಕ್ಸ್ ಮಸಾಲ ಮಾತಾಡೋನು. ನನ್ಗೆ ಬರ್ತಿದ್ದ ಚೂರು ಪಾರೂ ಇಂಗ್ಲಿಷ್ನೇ ಅವನ ಜೊತೆಲಿ ಪಿ.ಹೆಚ್.ಡಿ ಪಡೆದವನಿಗಿಂತ ತುಸು ಜಾಸ್ತಿನೆ ಚೆನ್ನಾಗಿ ಮಾತಾಡ್ತಿದ್ದೆ. ಎಷ್ಟೋ ಜನ ಹುಡುಗಿಯರ ಕಣ್ಣಿಗೆ ನಾನು ಕನ್ನಡದವನೇ ಅಲ್ಲಾ ಅನಿಸಿಬಿಟ್ಟಿತ್ತು ಅನ್ನೋದು ಸ್ವಲ್ಪ ತಡವಾಗಿ ಬೆಳಕಿಗೆ ಬಂದ ಸತ್ಯ. ಅವಾಗ ಒಂಚೂರು ಜಾಸ್ತೀನೆ ಭಯ ಆಗಿತ್ತು. ಅದೇನೇ ಇರಲಿ ಬಿಡಿ. ನನ್ನ ಕಥೆ ಗಿರಕಿ ಹೊಡಿಯೋದು ಮಳೆಗಾಲದ ಸುತ್ತ. ಈ ಛತ್ರಿ ವಿಷಯ ಗೊತ್ತಲ್ವ? ಹೆಣ್ ಮಕ್ಳಿಗೆ ವರ್ಷದ ಮುನ್ನೂರ ಅರವತ್ ನಾಲ್ಕುವರೆ ದಿನವೂ ಛತ್ರಿ ಜೊತೆಗಿರಬೇಕು. ಹುಡುಗರಿಗೆ ಮಳೆಯಲ್ಲಿ ಒದ್ದೆಯಾಗಿ ತಿರುಗೋದಾದ್ರು ಸರಿ, ಛತ್ರಿ ಇಟ್ಕೊಂಡು ತಿರುಗಾಡೋದು ಅಂದ್ರೆ ಅದೇನೋ ಬಿಟ್ಕೊಂಡಂಗೆ. ಅಂಥವರ ಸಾಲಿನಲ್ಲಿ ನಾನು ಮೊದಲನೆಯವ ಅನ್ಸತ್ತೆ. ನಾನು ಛತ್ರಿಯ ಮುಖವನ್ನು ಕೊನೆಯ ಬಾರಿ ನೋಡಿದ್ದು ನಿನ್ನೆ ಸಂಜೆ ಅತ್ತೆ ಮನೆಯಿಂದ ಬರುವಾಗ. ‘ಏನೋ ಪಾಪ ಹುಡುಗ ಛತ್ರಿ ನೋಡಿ ವರ್ಷಗಳೇ ಕಳೆದಿರಬೇಕು’ ಅಂದ್ಕೊಂಡ್ರಾ? ಹಾಗೇನೂ ಇಲ್ಲ. ಆದ್ರೆ ಕಾಲೇಜಿಗೆ ಛತ್ರಿ ತಗೊಂಡ್ಹೋಗೋಕೆ ಕೋಟಿ ಕೊಡ್ತೀನಿ ಅಂದ್ರೂ ಒಪ್ಕೊಳೋ ಮಕ್ಳೇ ಅಲ್ಲ ಬಿಡಿ ನಾವು.

ಅದೊಂಥರ ನೆಗೆಟಿವ್ ಜೊತೆಗೆ ಪಾಸಿಟಿವ್ ಕೂಡ. ಒಮ್ಮೊಮ್ಮೆ ಮಳೆ ನಿಲ್ಲದೆ ಬೆಳಿಗ್ಗೆ ಮನೆಯಿಂದ ಹೊರಡುವ ಹೊತ್ತಿಗೆ ಒಂದು ಕ್ಲಾಸ್ ಮುಗಿದುಹೋಗಿರುತ್ತಿತ್ತು. ಆದ್ರೆ ಹೆಚ್ಚಿನ ಸಲ ರಸ್ತೆಯಲ್ಲಿ ತುಂತುರು ಮಳೆಯಲ್ಲಿ ನೆನೆಯೋ ಹುಡುಗನ ಮೇಲೆ ಉಕ್ಕಿ ಬರೋ ಕರುಣೆ ಪಕ್ಕದ್ಮನೆ ಹುಡ್ಗೀರ ಹಾರ್ಟನ್ನ ಐಸ್ ಥರ ಕರಗಿಸಿಬಿಡ್ತಿತ್ತು ಅನ್ಸುತ್ತೆ. ಇದನ್ನೇ ನೋಡಿ, ‘ಪಾಸಿಟಿವ್’ ಅಂತ ಆವಾಗ್ಲೇ ಹೇಳಿದ್ದು. ಒಂದೇ ಛತ್ರಿ ಕೆಳಗೆ ಒಂದು ಹುಡುಗಿ ಜೊತೆ ಜಿನುಗೋ ಮಳೆನಲ್ಲಿ ವಾಕಿಂಗ್ ಹೋಗೋದು ಅಂದ್ರೆ ಸ್ವರ್ಗಕ್ಕೆ ಕಿಚ್ಚು ಹಚ್ಚಿದ ಹಾಗೇಯೇ ಅಲ್ವಾ? ಇನ್ನೂ ಅನುಭವಕ್ಕೆ ಬಂದಿದ್ದಿಲ್ಲಾ ಅಂದ್ರೆ ಇನ್ನೊಮ್ಮೆ ಟ್ರೈ ಮಾಡಿ ನೋಡಿ. ಅಯ್ಯೋ ಬರೀ ಛತ್ರಿ ನೋಡಿ ಬಿ* ಸಹವಾಸ ಮಾಡ್ಬಿಟ್ಟೀರಾ ಆಮೇಲೆ. ಬೀಳೋ ಹೊಡೆತಕ್ಕೆ ನಾನಂತೂ ಹೊಣೆಗಾರನಲ್ಲಪ್ಪ.

ನಂಗೆ ಜೊತೆಯಾಗ್ತಿದ್ದ ರಮ್ಯಾ, ಕವನ, ಪ್ರತಿಮಾ ಎಲ್ಲರೂ ಕೊನೆವರೆಗೂ ನನ್ನ ಪಾಲಿನ ದೇವತೆಗಳೆ. ಅವರುಗಳ ಛತ್ರಿಯ ಆಯಸ್ಸು ಗಟ್ಟಿಗಿರಲಿ ಅಂತ ಬೇಡ್ಕೊಳೋಕ್ಕಾದ್ರೂ ವಾರಕ್ಕೊಮ್ಮೆ ದೇವಸ್ಥಾನಕ್ಕೆ ಹೋಗ್ತಿದ್ದಿದ್ದು ಈಗ ಇತಿಹಾಸ ಬಿಡಿ. ಒಂದೊಂದು ದಿನ ಮನೆ ಬಿಡುವ ಹೊತ್ತಿಗಾಗಲೇ ಒಂದು ಛತ್ರಿ ಸಿಕ್ಕರೆ ಲೋಕಲ್ ಬಸ್ಸಲ್ಲಿ ಅರ್ಧ ಗಂಟೆ ಹರಟೆ ಪಕ್ಕಾ ಆಗಿರ್ತಿತ್ತು. ಹೌದು ಇಂಥ ಮೀಟಿಂಗುಗಳೇ ಒಳ್ಳೇ ಗೆಳೆತನಕ್ಕೆ ನಾಂದಿ ಆಗ್ತಿತ್ತು. ಥ್ಯಾಂಕ್ಸ್ ಹೇಳೋದು ಮಳೆಗೋ, ಛತ್ರಿಗೋ ಅಂತ ಕನ್ಫ್ಯೂಸ್’ಆಗಿಬಿಡ್ತಿದ್ದೆ. ನಮ್ ಏರಿಯಾ ಬಸ್ಟ್ಯಾಂಡ್ಗೆ ಸರಿಯಾದ ಸಮಯಕ್ಕೆ ಬಸ್ ಬರೋದು ಅಂದ್ರೆ, ತುಂಬಾ ಹೊಟ್ಟೆ ಹಸಿದಾಗ ಚಿಕನ್ ಬಿರಿಯಾನಿ ಸಿಕ್ಕಿದ್ಹಂಗೇನೆ. ಟೈಮ್ ಸಿಕ್ಕಾಗ ಬರೋ ಬಸ್ಸುಗಳಿಗೆ ಬಕಪಕ್ಷಿಗಳಂತೆ ಕಾಯ್ತಾ ನಿಂತಿರುವ ನಮಗೆಲ್ಲಾ ಮಳೆರಾಯ ದೊಡ್ಡ ವಿಲನ್. ಒಂದೊಂದ್ಸಲ ಅವನು ಪಾಪ ಅನಿಸಿಬಿಡ್ತಿದ್ದ. ಮಳೆ ಸುರಿಯೋವಾಗ ನೆನೆಯೋ ನನ್ನ ನೋಡಿ ಪಕ್ಕದಲ್ಲಿರೋ ಒಬ್ಬಳಾದ್ರೂ ಹುಡುಗಿ ಹೃದಯ ಕರಗದೇ ಇರೋಕೆ ಸಾಧ್ಯನ? ಕೊನೆಗೂ ಛತ್ರಿ ಕೆಳಗಡೆ ನಾನ್ ನಿಲ್ಲೋಕೆ ಒಂದು ಐದು ನಿಮಿಷ ಅಷ್ಟೇ ತಗುಲುತ್ತಿದ್ದಿದ್ದು. ಈ ಬಸ್ಸುಗಳನ್ನು ಕಾಯೋದೆ ಒಂದು ಅವಾಂತರವಾದರೆ ಬಸ್ಟ್ಯಾಂಡ್ ಎದುರಿಗೆ ಇರೋ ಕೆಸರು ಗದ್ದೆಯಲ್ಲಿ ಕಾಲಿಡೋದು ಇನ್ನೊಂದು ಗ್ರಹಚಾರ. ಛತ್ರಿ ಹಿಡಿದವಳ ಮುಖ ನೋಡಿ ಕೆನ್ನೆ ಕೆಂಪಾಗ್ತಿದ್ದಿದ್ದು. ಕಣ್ಸನ್ನೆಯಲ್ಲಿ ಮಾತಾಡೋಕೆ ಶುರು ಮಾಡ್ತಿದ್ದಿದ್ದು ನೆನಪಿಸಿಕ್ಕೊಂಡಾಗಲೆಲ್ಲ ಕಚಗುಳಿ ಇಟ್ಟಂಗೆ. ಅಷ್ಟಕ್ಕೆ ಮುಗಿಯೋ ಚಿಕ್ಕ ಕಥನಗಳೇನು ಅಲ್ಲಾ ಬಿಡಿ. ಈ ಛತ್ರಿಯ ಸಹವಾಸದಿಂದ ನನ್ನಂಥ ಎಷ್ಟೋ ಜನ ಹುಡುಗರು ಪ್ರೀತಿ ಬಲೆಗೂ ಬೀಳೋ ಹಾಗೆ ಮಾಡಿದೆ.

ಪೂರ್ತಿ ಕಪ್ಪಗಿನದು, ಬಿಳಿಯದು, ನೀಲಿಯದು ಜೊತೆಗೆ ಹೂವಿನ ಚಿತ್ತಾರದ ಬಣ್ಣ ಬಣ್ಣದ ಛತ್ರಿಗಳ ಕೆಳಗೂ ನಿಂತು, ಕಲ್ಪನೆಯ ಲೋಕದಲ್ಲಿ ಪ್ರಣಯ ಗೀತೆಗೆ ಮುನ್ನುಡಿ ಹಾಕುತ್ತಿದ್ದ ಕಾಲಕ್ಕೆ ಮತ್ತೆ ಮನಸಿನಲ್ಲಿ ದ್ವಂದ್ವ, ತಾಕಲಾಟಗಳು – “ಥ್ಯಾಂಕ್ಸ್ ಛತ್ರಿಗೋ, ಮಳೆಗೋ?” ಅಂತ.

ಕೊನೆಗೆ ಬಸ್ ಇಳಿದು, ಜೈ ಕಾಡು ಮಲ್ಲೇಶ್ವರ ಅಂತ ಒಂದರ್ಧ ಕಿಲೋಮೀಟರ್ ನಡೆದು ಸಾಗಬೇಕಿದ್ದ ವಿದ್ಯಾ ದೇಗುಲಕ್ಕೆ ಮಳೆ ನಿಲ್ಲದ ಹೊತ್ತಲ್ಲಿ ಹುಡುಕಾಟ – ಮತ್ಯಾವುದೋ ಛತ್ರಿಗೆ. ಅಲ್ಲಿಗೆ ಕಾಲೇಜಿನ ಮುಂಭಾಗ ತಲುಪುವವರೆಗಿನ ಪ್ರಯಾಣಕ್ಕೆ ಛತ್ರಿ ಜೊತೆಗೆ ಒಂದು ಬ್ಯೂಟಿಫುಲ್ ವಾಕ್ ಮೇಟ್ ಕೂಡ. ಕರೆದದ್ದು ಛತ್ರಿಗೇ ಆದರೂ, ಅಲ್ಪ ವಿರಾಮವೂ ಇರದ ಮಾತುಗಳು ಛತ್ರಿಯನ್ನೂ ಮರೆಸಿ ಬಿಡುತ್ತಿತ್ತು. ಅದ್ಯಾಕೋ ಈ ಹುಡ್ಗೀರ ಜೊತೆ ನಡೆಯುವಾಗ ಪಾಪ ಅವರುಗಳ ಕೈನಲ್ಲಿ ಛತ್ರಿ ಇದ್ರೆ ಕೈ ನೋವು ಬರುತ್ತೇನೋ ಅಂತ ಇಸ್ಕೊಳೋ ತುಂಬಾ ದೊಡ್ಡಮನಸ್ಸು ನಮ್ದು. ಇದೇನೂ ಒಂದಿನಕ್ಕೆ ಮುಗಿಯೋ ಕಥೆ ಅಲ್ಲ. ಮಳೆಗಾಲದಲ್ಲಿ ಪೋಲಿ ಹುಡುಗನಿಗೆ ಆಕಸ್ಮಿಕವೆನ್ನುವಂತೆ ಛತ್ರಿಗಳ ಕೆಳಗೆ ಇರುವ ಪ್ರೀತಿಯ ಕಥೆಗಳು ಸಾವಿರ.

ನೀವ್ ಏನೇ ಹೇಳಿ, ಚಡ್ಡೀ ದೋಸ್ತ್’ಗಿಂತ ಈ ಛತ್ರಿ ಅನ್ನೋ ದೋಸ್ತ್ ತೋರಿದ ಪ್ರಪಂಚವು ಬಣ್ಣ ಬಣ್ಣದ್ದು.
ನಿಮ್ಮ ಮನೆ ಮೂಲೆಲಿ ಬಿದ್ದಿರೋ ಛತ್ರಿಗೂ ನನ್ನದೊಂದು ನಮಸ್ಕಾರ ಹೇಳ್ಬಿಡಿ.

LEAVE A REPLY

Please enter your comment!
Please enter your name here