ಬಾಹುಬಲಿಯೆಂದರೆ ಕನ್ನಡನಾಡಿನ ಜನತೆಗೆ ಬಹು ಹಿಂದಿನಿಂದಲೂ ಒಂದು ಬಗೆಯ ಆತ್ಮೀಯತೆಯ ಭಾವ ಬೆಳೆದುಬಂದಿದೆ. ಆತ ನಮ್ಮ ಮನೆಯ ಹಿರಿಯಣ್ಣನಿದ್ದಂತೆ. ಅವನೆಂದರೆ ಪ್ರೇಮಾಭಿಮಾನಗಳಿಂದ ಕೂಡಿದ ಗೌರವ, ಭಕ್ತಿ – ಕನ್ನಡಿಗರಿಗೆ.

ಕರ್ನಾಟಕದಲ್ಲಿ ಬಾಹುಬಲಿಯ ಮೂರ್ತಿಯಿರುವ ಬಸದಿಗಳು ಹಲವು ಇವೆಯಾದರೂ, ನಮ್ಮ ಮೈಸೂರು-ಹಾಸನ ಜಿಲ್ಲೆಗಳ ಸುತ್ತಮುತ್ತಲಿನ ಜನಕ್ಕೆ ಅವನ ಹೆಸರು ಕೇಳಿದ ತಕ್ಷಣ ಶ್ರವಣಬೆಳುಗೊಳದ ಬಾಹುಬಲಿಯ ಭವ್ಯ ಮೂರ್ತಿಯೇ ಕಣ್ಣೆದುರು ಮೂಡುತ್ತದೆ. ಇನ್ನು ಕರಾವಳಿಯ ಕಡೆಯವರಿಗಾದರೆ ಕಾರ್ಕಳ, ಧರ್ಮಸ್ಥಳಗಳಲ್ಲಿನ ಬಾಹುಬಲಿಯ ಮೂರ್ತಿಯೂ ನೆನಪಾದೀತು. ನಮ್ಮೂರಿನ ಕಡೆಯೆಲ್ಲ ಈತನನ್ನು ಬಾಹುಬಲಿ ಎಂಬ ಹೆಸರಿಗಿಂತಲೂ ’ಗೊಮ್ಮಟ’, ’ಗೊಮ್ಮಟೇಶ’ ಎಂದು ಗುರುತಿಸುವುದೇ ಹೆಚ್ಚು. ಆ ಹೆಸರೇ ಅವನನ್ನು ನಮಗೆ ಇನ್ನಷ್ಟು ಹತ್ತಿರವಾಗಿಸುತ್ತದೆ.

ಹನ್ನೆರಡು ವರ್ಷಗಳಿಗೊಮ್ಮೆ ಬಾಹುಬಲಿಯ ಮೂರ್ತಿಗೆ ಮಹಾಮಜ್ಜನ ಅಥವಾ ಮಹಾಮಸ್ತಕಾಭಿಷೇಕವನ್ನು ನೆರವೇರಿಸುವ ಪರಂಪರೆ ಬಹು ಹಿಂದಿನಿಂದ ನಡೆದುಬಂದಿದೆ. ಶ್ರವಣಬೆಳಗೊಳದಲ್ಲಿ ನಡೆಯುವ ಮಹಾಮಸ್ತಕಾಭಿಷೇಕದ ಆಚರಣೆ ಶುರುವಾಗಿ ಸುಮಾರು ಸಾವಿರ ವರ್ಷಗಳೇ ಕಳೆದಿವೆ. ಮೊನೆಮೊನ್ನೆ ನಡೆದ ಮಹಾಮಜ್ಜನವು ಈ ಸಂಪ್ರದಾಯದ ಪೈಕಿ ನಡೆದ ೮೮ನೇ ಮಹೋತ್ಸವವಂತೆ.

ಹೇಗಾದರೂ ಮಾಡಿ ಈ ವೈಭವವನ್ನು ಕಣ್ಣಾರೆ ನೋಡಬೇಕೆಂಬ ನನ್ನ ಹಂಬಲವಂತೂ ಹಾಗೇ ಉಳಿಯಿತು. ಟಿವಿಯಲ್ಲಿ, ಸೋಷಿಯಲ್ ಮೀಡಿಯಾಗಳಲ್ಲಿ ಕಂಡ ವಿಡಿಯೊಗಳನ್ನೂ, ಫೋಟೊಗಳನ್ನೂ ನೋಡಿ ಅಷ್ಟಕ್ಕೇ ಸಮಾಧಾನ ಪಟ್ಟುಕೊಳ್ಳಬೇಕಾಯಿತು. ಪರದೇಶದಲ್ಲಿದ್ದವರ ಪಾಡು ಇಷ್ಟೆ ಅನಿಸುತ್ತೆ!

ನಾನು ಮೈಸೂರಿನಲ್ಲಿದ್ದಾಗಲಂತೂ ತಿಂಗಳಿಗೊ ಎರಡು ತಿಂಗಳಿಗೊ ಒಮ್ಮೆಯಾದರೂ ಶ್ರವಣಬೆಳಗೊಳಕ್ಕೆ ಹೋಗುತ್ತಿದ್ದೆ. ಬೆಳ್ಳಂಬೆಳಗ್ಗೆಯಾದರೂ ಆಯ್ತು, ಉರಿಬಿಸಿಲ ಮಧ್ಯಾಹ್ನವಾದರೂ ಆಯ್ತು ಅಥವಾ ತಂಪಾದ ಸಂಜೆಹೊತ್ತಾದರೂ ಸರಿಯೆ; ಅಷ್ಟು ಮೆಟ್ಟಿಲುಗಳನ್ನೇರಿ ವಿಂಧ್ಯಗಿರಿಯ ತುದಿಯನ್ನು ತಲುಪಿದರೆ ಆತನ ದಿವ್ಯಮೂರ್ತಿಯ ದರ್ಶನ. ಮುದ್ದುಮೊಗದ, ತಿಳಿನಗುವನ್ನು ಸೂಸುವ ಆ ಮಂಗಲಮೂರ್ತಿಯನ್ನು ಕಂಡ ಮರುಕ್ಷಣವೇ ಅಲ್ಲಿಯವರೆಗೂ ನಡೆದುಬರಲು ಪಟ್ಟ ಶ್ರಮವೆಲ್ಲ ಮರೆಯಾಗಿಬಿಡುತ್ತದೆ. ಆತನ ಸಾನ್ನಿಧ್ಯವು ಕೊಡುತ್ತಿದ್ದ ಆ ಧನ್ಯತೆಯ ಭಾವವಾದರೂ ಎಂಥದ್ದು! ಮತ್ತೆಮತ್ತೆ ನೋಡಬೇಕೆನಿಸುವ, ಮೌನವಾಗಿಯೆ ನಮಗೆ ಶಾಂತತೆಯನ್ನು ಬೋಧಿಸುವ ಆತನ ಚೆಂದದ ಮೊಗದ ಮೋಡಿಗೆ ಸಿಲುಕಿ ಅದೆಷ್ಟೊ ಬಾರಿ ಅಲ್ಲಿಗೆ ಹೋಗಿ ಆನಂದದ ಕಣ್ಣೀರು ಸುರಿಸಿದ್ದೇನೆ.

ಜೈನ ಸಂಪ್ರದಾಯದ ಪ್ರಕಾರ ಬಾಹುಬಲಿಯು ಪ್ರಸ್ತುತ ಕಲ್ಪದ ಪ್ರಥಮ ಕಾಮದೇವನೆಂದು ಪ್ರತೀತಿ. ಬೆಳುಗೊಳದ ಬಾಹುಬಲಿಯ ಮೂರ್ತಿಯಾದರೂ ಆ ಹೆಸರಿಗೆ ಅನುವರ್ತಿಯಾಗಿಯೇ ಇದೆ. ಮನ್ಮಥ, ಕಾಮದೇವನೆಂದಮೇಲೆ ಅವನ ರೂಪಾತಿಶಯದ ಬಗ್ಗೆ ಹೇಳುವುದಿನ್ನೇನಿದೆ. ನೋಡುಗರನ್ನು ಮಂತ್ರಮುಗ್ಧರನ್ನಾಗಿಸುವ ಆ ದಿವ್ಯ ಮಂಗಳಮೂರ್ತಿಯ ಸೌಂದರ್ಯವನ್ನು ಕಣ್ಣಾರೆ ನೋಡಿಯೇ ತಣಿಯಬೇಕು.

ಬಾಹುಬಲಿಯ ಸೊಬಗಿನ ರೂಪವನ್ನು ವರ್ಣಿಸುತ್ತ ಕನ್ನಡದ ಆದಿಕವಿ ಪಂಪನು ಹೀಗೆ ಹೇಳುತ್ತಾನೆ:

ದಳಿತಾಂಭೋಜಾಸ್ಯನಿಂದೀವರದಳನಯನಂ ಪಕ್ವಬಿಂಬಾಧರಂ ಕೋ
ಮಳವಂಶಶ್ಯಾಮನಂಭೋಧರರವನಳಿನೀಕುಂತಳಂ ವ್ಯೂಢವಕ್ಷ
ಸ್ಸ್ಥಳನಾಜಾನುಪ್ರಲಂಬ ಪ್ರಬಲ ಭುಜಯುಗಂ ಚಾರುವೃತ್ತೋರುಯುಗ್ಮಂ
ಕುಳಶೈಲೇಂದ್ರೋನ್ನತಂ ಬಾಹುಬಲಿ ಸಕಲ ಸೌಂದರ್ಯಸಂಪನ್ನನಾದಂ

-ಆದಿಪುರಾಣ ೮.೫೧

ಅವನ ಮೊಗವು ಆಗಷ್ಟೆ ಅರಳಿದ ಕಮಲದಂತಿದೆ. ಆತನ ಕಣ್ಣುಗಳೊ, ಕನ್ನೈದಿಲೆಗಳಂತಿವೆ. ಅವನ ತುಟಿಗಳು ಕಳಿತ ತೊಂಡೆಹಣ್ಣುಗಳಂತೆ. ಅವನಾದರೋ, ಕೋಮಲವಾದ ಬಿದಿರಿನಂತೆ ಶ್ಯಾಮಲವರ್ಣದವನು. ಅವನ ದನಿ ಮೇಘಘೋಷದಂತೆ; ದುಂಬಿಗಳನ್ನು ಹೋಲುವ ಮುಂಗುರುಳು, ಹರವಾದ ಎದೆ. ಪ್ರಬಲವಾದ, ನೀಳವಾದ ತೋಳ್ಗಳು. ದುಂಡಾದ, ಸುಂದರವಾದ ಊರುದ್ವಯ (ತೊಡೆಗಳು). ಈ ಬಗೆಯ ರೂಪ ವೈಭವಗಳಿಂದ ಕೂಡಿದ ಬಾಹುಬಲಿಯು ಉನ್ನತವಾದ ಕುಲಶೈಲವನ್ನು ಹೋಲುತ್ತಿದ್ದನು.

ಎಂತಹ ಸುಂದರ ವರ್ಣನೆ.! ಬಹುಶಃ ಪಂಪನ ಈ ಪದ್ಯವೇ ಚಾವುಂಡರಾಯ ಹಾಗೂ ಶಿಲ್ಪಿ ಅರಿಷ್ಟನೇಮಿಗೆ ಸ್ಫೂರ್ತಿಯಾಗಿತ್ತೊ ಎಂದು ಒಮ್ಮೊಮ್ಮೆ ಅನಿಸುವುದುಂಟು, ನನಗೆ. ಆ ಸಾಧ್ಯತೆ ಇದ್ದಿರಬಹುದೇನೊ! ಪಂಪನು ಚಾವುಂಡರಾಯನ ಕಾಲಕ್ಕಿಂತ ಹಿಂದಿನವ. ಚಾವುಂಡರಾಯನ ಕಾಲಕ್ಕಾಗಲೇ ಕವಿ ಪಂಪನು “ಜಿನಾಗಮವನ್ನು ಬೆಳಗಿ”ಸುವಂತಹ ‘ಆದಿಪುರಾಣ’ ಕೃತಿಯನ್ನು ರಚಿಸಿದ್ದನು. ಆಗ್ಗೆ ಅದು ಸಾಕಷ್ಟು ಪ್ರಸಿದ್ಧಿಯನ್ನೂ ಪಡೆದಿತ್ತು. ಅಂತಹ ಮಹತ್ತರ ಕೃತಿಯೂ, ಅದರಲ್ಲಿನ ಬಾಹುಬಲಿಯ ವರ್ಣನೆಯೂ ಈ ಇಬ್ಬರ ಮೇಲೆ ಪ್ರಭಾವ ಬೀರಿರಲಾರದೆ? ಹಾಗಾಗಿ ಈ ಸಾಧ್ಯತೆಯನ್ನು ತಳ್ಳಿಹಾಕುವ ಹಾಗೇನೂ ಇಲ್ಲ.

ನನಗಂತೂ ಬಾಹುಬಲಿಯ ಮೂರ್ತಿಯ ಎದುರು ನಿಂತಾಗಲೆಲ್ಲ ಪಂಪನ ‘ಆದಿಪುರಾಣ’ದಲ್ಲಿ ವರ್ಣಿತವಾಗಿರುವ ಚಿತ್ರಗಳೆಲ್ಲ ಕಣ್ಣ ಮುಂದೆ ಸುಳಿಯುವಂತಾಗುತ್ತದೆ. ಮನಸ್ಸು ಮತ್ತೆಮತ್ತೆ ಬಾಹುಬಲಿಯ ತ್ಯಾಗಕ್ಕೆ, ಔನ್ನತ್ಯಕ್ಕೆ ಮಾರುಹೋಗುತ್ತದೆ.

ಭರತ-ಬಾಹುಬಲಿಯ ಕಥೆಯು ಹಳಗನ್ನಡದ ಕೆಲವು ಕಾವ್ಯಗಳಲ್ಲಿ ವರ್ಣಿತವಾಗಿದೆ. ಪ್ರಸ್ತುತ ಲೇಖನಮಾಲೆಯಲ್ಲಿ ಪಂಪನ ಆದಿಪುರಾಣದಲ್ಲಿ ಬರುವ ಭರತ-ಬಾಹುಬಲಿಯರ ಕಥೆಯನ್ನು ಸಂಗ್ರಹಿಸುವ ಪ್ರಯತ್ನವನ್ನು ಮಾಡಿದ್ದೇನೆ.

ಭರತಬಾಹುಬಲಿಯರ ಕತೆ:

ಪ್ರಸ್ತುತ ಕಲ್ಪದ ಮೊದಲ ತೀರ್ಥಂಕರ ಆದಿನಾಥ. ಈತನಿಗೆ ವೃಷಭದೇವ, ಪುರುದೇವ ಎಂಬ ಹೆಸರುಗಳೂ ಉಂಟು. ಭರತನು ಆದಿನಾಥ ಹಾಗೂ ಯಶಸ್ವತೀದೇವಿಯರ ಮೊದಲ ಮಗ. ಭರತನ ನಂತರ ಯಶಸ್ವತೀದೇವಿಗೆ ನೂರು ಜನ ಗಂಡು ಮಕ್ಕಳೂ, ಬ್ರಾಹ್ಮಿಯೆಂಬ ಮಗಳೂ ಜನಿಸಿದರು. ಆದಿದೇವನನಿಗೆ ತನ್ನ ಎರಡನೇ ಹೆಂಡತಿಯಾದ ಸುನಂದೆಯಲ್ಲಿ ಬಾಹುಬಲಿ ಎಂಬ ಮಗನೂ ಸೌಂದರಿ ಎಂಬ ಮಗಳೂ ಜನಿಸುತ್ತಾರೆ.
ಮಕ್ಕಳು ಕೌಮಾರಾವಸ್ಥೆಗೆ ತಲುಪಿದಾಗ ಆದಿನಾಥನು ಅವರೆಲ್ಲರಿಗೆ ಯಥೋಚಿತ ಶಾಸ್ತ್ರ, ವಿದ್ಯೆಗಳನ್ನು ಕಲಿಸಿದನು.
ಮುಂದೊಮ್ಮೆ, ತಾನು ತಪಕ್ಕೆ ಹೊರಡುವ ಮುನ್ನ ಆದಿನಾಥನು ತನ್ನ ಯಾವದ್ರಾಜ್ಯವನ್ನೂ ಅವನ ಮಕ್ಕಳೆಲ್ಲರಿಗೆ ಹಂಚಿಕೊಟ್ಟನು. ಅವರಲ್ಲಿ ಕೆಲವರು ರಾಜ್ಯವನ್ನೊಲ್ಲದೆ ತಮ್ಮ ತಂದೆಯೊಡನೆಯೇ ತಾವೂ ತಪವನ್ನು ಕೈಗೊಂಡರು. ಹೆಣ್ಣುಮಕ್ಕಳಾದ ಬ್ರಾಹ್ಮಿ ಹಾಗೂ ಸೌಂದರಿಯರೂ ಕೂಡ ಆದಿನಾಥನೊಡನೆ ಹೊರಟರು.

ಇತ್ತ, ಅಯೋಧ್ಯೆಯನ್ನು ರಾಜಧಾನಿಯನ್ನಾಗಿಸಿಕೊಂಡು ಭರತನೂ, ಪೌದನಪುರದಲ್ಲಿ ಬಾಹುಬಲಿಯೂ, ಇನ್ನಿತರ ರಾಜ್ಯಗಳಲ್ಲಿ ಅವರ ಸೋದರರೂ ರಾಜ್ಯಪಾಲನೆಯಲ್ಲಿ ನಿರತರಾದರು. ಹೀಗಿರುತ್ತಿರಲು, ಒಂದು ದಿನ ಭರತನ ಕೋಶಾಗಾರದಲ್ಲಿ ಸೂರ್ಯಮಂಡಲದಂತೆ ಪ್ರಕಾಶಮಾನವಾದ ಸುದರ್ಶನವೆಂಬ ಚಕ್ರರತ್ನವು ಆವಿರ್ಭವಿಸಿತು.

ಭರತನು ಆ ಕಲ್ಪದ ಪ್ರಥಮ ಚಕ್ರವರ್ತಿಯಾಗಲು ಜನಿಸಿದವನು. ಈಗ ಅವನ ಆಯುಧಾಗಾರದಲ್ಲಿ ತೇಜೋರೂಪವಾದ ಚಕ್ರರತ್ನವೂ ಉದಯಿಸಿತ್ತು. ಹಾಗಾಗಿ ಇನ್ನು ಅವನು ಆ ಚಕ್ರರತ್ನವನ್ನು ಮುಂದಿರಿಸಿಕೊಂಡು ದಿಗ್ವಿಜಯ ಯಾತ್ರೆಗೆ ಹೊರಡಬೇಕು. ಚಕ್ರವು ಕ್ರಮಿಸಿದ ಕಡೆಗೆಲ್ಲ ತನ್ನ ಸೈನ್ಯದೊಡನೆ ಹೊರಟು, ಆಯಾ ರಾಜ್ಯದ ರಾಜರು ತನ್ನ ಸಾರ್ವಭೌಮತ್ವವನ್ನು ಒಪ್ಪಿಕೊಳ್ಳುವಂತೆ ಮಾಡಬೇಕು. ಅಲ್ಲಿಯ ರಾಜರು ತಾವಾಗಿಯೇ ಮಣಿದುಬಂದು ಅವನಿಗೆ ಕಪ್ಪಕಾಣಿಕೆಗಳನ್ನೊಪ್ಪಿಸಿದರೆ ಸರಿ, ಇಲ್ಲವಾದರೆ ಅವರೊಡನೆ ಸೆಣೆಸಿ, ಅವರನ್ನು ಸೋಲಿಸಿದ ನಂತರ ಮುಂದುವರೆಯಬೇಕು.

ಜ್ಯೋತಿಷಿಗಳು ಸೂಚಿಸಿದ ಪ್ರಶಸ್ತವಾದ ದಿನದಂದು, ಉತ್ತಮ ಮುಹೂರ್ತದಲ್ಲಿ – ಅಪಾರವಾದ ಸೈನ್ಯದೊಡನೆ ಭರತನ ದಿಗ್ವಿಜಯ ಯಾತ್ರೆಯು ಮೊದಲಾಯಿತು. ಚಕ್ರರತ್ನವು ಹಾಯ್ದ ಕಡೆಗೆ ಹೊರಟು, ನಾನಾ ದೇಶಗಳನ್ನೂ ರಾಜ್ಯಗಳನ್ನೂ ಕ್ರಮಿಸಿ, ಅಲ್ಲಿಯ ಅರಸರೆಲ್ಲರೂ ತನಗೆ ಮಣಿಯುವಂತೆ ಮಾಡಿ ಭರತನ ದಿಗ್ವಿಜಯ ಯಾತ್ರೆಯು ಸಾಗಿತು. ತನಗೆ ಎದುರಾದ ನರೇಂದ್ರರನ್ನೂ, ವ್ಯಂತರರನ್ನೂ, ದೇವತೆಗಳನ್ನೂ* ಸೋಲಿಸಿ, ಅವರಿಂದ ಕಪ್ಪಕಾಣಿಕೆಗಳನ್ನು ಪಡೆದು ಭರತನು ಮುಂದುವರೆದಿದ್ದನು.

ಹೀಗೆ ಸಾಗಿಬಂದ ಭರತನ ಪರಿವಾರವು ಮುಂದೊಮ್ಮೆ ಸುಪ್ರಸಿದ್ಧವಾದ ವೃಷಭಾಚಲವನ್ನು ಸಮೀಪಿಸಿತು. ಭರತನಿಗೆ ತನ್ನ ಹೆಚ್ಚುಗಾರಿಕೆಯನ್ನೂ, ತನ್ನ ಶೌರ್ಯ ಸಾಮರ್ಥ್ಯಗಳನ್ನೂ ಸಾರುವಂತಹ ಶಾಸನವೊಂದನ್ನು ಆ ವೃಷಭಾಚಲದ ಮೇಲೆ ಬರೆಯಿಸುವ ಬಯಕೆಯಾಯಿತು.

ಆ ವೃಷಭಾದ್ರಿಯ ಮೇಖಳಾಭಿತ್ತಿಯೊಳ್ ಆತ್ಮೀಯ ವಿಶ್ವವಿಶ್ವಂಭರಾ ವಿಜಯ ಪ್ರಶಸ್ತಿಯನ್ ಅೞ್ತಿಯೊಳ್ ಬರೆಯಿಸುವೆನೆಂದು ಪೋಗಿ ನೋಡುವನ್ನೆಗಂ:

“ಅದರೊಳ್ ಅನೇಕ ಕಲ್ಪ ಶತಕೋಟಿಗಳೊಳ್ ಸಲೆ ಸಂದ ಚಕ್ರಿವೃಂದದ ಚಲದ-ಆಯದ-ಆಯತಿಯ, ಬೀರದ, ಚಾಗದ ಮಾತುಗಳ್ ಪೊದೞ್ದು ಒದವಿರೆ ತತ್ಪ್ರಶಸ್ತಿಗಳೊಳ್, ಅಂತವನೊಯ್ಯನೆ ನೋಡಿ ಸೋರ್ದುದು ಕೊಳಗೊಂಡ ಗರ್ವರಸಮಾ ಭರತೇಶ ಚಕ್ರವರ್ತಿಯಾ.”

ಹಾಗೆ ತನ್ನ ಶೌರ್ಯ ಪ್ರಶಸ್ತಿಗಳನ್ನು ಸಾರುವ ಶಾಸನವನ್ನು ಬರೆಯಿಸುವೆನೆಂಬಾಸೆಯಿಂದ ಬಂದ ಭರತನು ನೋಡುತ್ತಾನೆ, ಹಿಂದಿನ ಅನೇಕ ಶತಕೋಟಿ ಕಲ್ಪಗಳಲ್ಲಿ ಪ್ರಖ್ಯಾತರಾಗಿ ಆಳಿದ ಚಕ್ರವರ್ತಿಗಳ ಚಲ, ಶೌರ್ಯ ತ್ಯಾಗಗಳನ್ನು ವಿಪುಲವಾಗಿ ಹಾಡಿಹೊಗಳುವ ಅನಂತ ವಿಜಯಶಾಸನಗಳಿಂದ ಆ ವೃಷಭಾಚಲವು ಈಗಾಗಲೆ ತುಂಬಿ ಹೋಗಿತ್ತು. ಅದನ್ನು ಕಂಡ ಭರತನಲ್ಲಿ ನೆಲೆಸಿದ್ದ ಗರ್ವರಸವೆಲ್ಲ ಸೋರಿಹೋಯಿತು.

ಕಾವ್ಯದಲ್ಲಿ ಇದೊಂದು ಬಹಳ ಸ್ವಾರಸ್ಯಕರವಾದ ಘಟ್ಟ. ತಾನೇನು, ತನ್ನ ಹಿರಿಮೆಯೇನು; ಎದುರಾಳಿ ರಾಜರನ್ನೂ, ಅನೇಕ ವ್ಯಂತರಾಮರರನ್ನೂ ಸೋಲಿಸಿ ಸಾಧಿಸಿದ ತನ್ನ ಬಲ ಸಾಮರ್ಥ್ಯಗಳೇನು – ಎಂಬ ಗರ್ವದಿಂದ ಕೂಡಿದ್ದ ಭರತನಿಗೆ, ತನಗಿಂತ ಹಿಂದಿನ ಶತಕೋಟಿ ಚಕ್ರವರ್ತಿಗಳ ವಿಜಯಶಾಸನಗಳ ಪಟ್ಟಿಯನ್ನು ಕಂಡು ಅದೆಂತಹ ಗರ್ವಭಂಗವಾಗಿರಬೇಡ!

ಆದರೆ, ಕಥೆ ಇಲ್ಲಿಗೇ ನಿಲ್ಲುವುದಿಲ್ಲ; ಭರತನಿಗೆ ಇನ್ನೂ ಸಂಪೂರ್ಣವಾಗಿ ಜ್ಞಾನೋದಯವಾಗುವುದಿಲ್ಲ. ವೃಷಭಾಚಲದ ಮೇಲಿದ್ದ ಶಾಸನಗಳಲ್ಲಿ ಒಂದನ್ನು ತನ್ನ ಬಳಿಯಿದ್ದ ದಂಡರತ್ನದಿಂದ ತೊಡೆದುಹಾಕಿದನು. ಆ ಜಾಗದಲ್ಲಿ, ತನ್ನ ಶೌರ್ಯ-ಸಾಹಸಗಳನ್ನು ಹೊಗಳುವ ಶಾಸನವೊಂದನ್ನು ಬರೆಯಿಸಿದನು.
“ಸ್ವಸ್ತಿ ಸಮಸ್ತ ನರೇಶ್ವರ ಮಸ್ತಕ ವಿನ್ಯಸ್ತ ಶಾಸನಂ ಸಕಲ ಜಗದ್ವಿಸ್ತಾರಿತ ಯಶನನ್ವಯ ವಿಸ್ತಾರನಾದಿದೇವನಗ್ರತನುಜಂ..


ದೇವಾಂಗನೆಯರ್ ಪಾಡುವರಾವನ ಜಸಮಂ ಕುಳಾಚಳಾವಳಿಯೊಳ್ ಶೌರ್ಯಾವಷ್ಟಂಭದಿನಾಳ್ದವನಾವಂ ಷಟ್ಖಂಡಿತ ಕ್ಷಿತಿತಳಮಂ
ಆತಂ ಭರತೇಶ್ವರನಿಂತೀ ತೆಱದಿಂ ನೆಗೞ್ದ ತನ್ನ ಕೀರ್ತಿಯನೀ ವಿಖ್ಯಾತ ವೃಷಭಾದ್ರಿಯೊಳ್ ಸುರಗೀತಯಶಂ ನಿಱಿಸಿದಂ ನೆಲಂ ನಿಲ್ವಿನೆಗಂ”

’ಸ್ವಸ್ತಿ. ಆದಿದೇವನ ಮೊದಲ ಮಗನಾದ ಈ ಭರತೇಶ್ವರನು ತನ್ನ ವಂಶದ ಹಿರಿಮೆಯನ್ನು ಮುಂದುವರೆಸಿದವನು, ತನ್ನ ಯಶ: ಕೀರ್ತಿಯನ್ನು ಜಗತ್ತಿನಾದ್ಯಂತ ಹರಡಿದವನು. ಸಕಲ ನರೇಂದ್ರರಿಂದ ನಮಿಸಲ್ಪಟ್ಟವನು…
…..ದೇವಾಂಗನೆಯರು ಕುಲಗಿರಿಗಳ ಮೇಲೆ ಯಾವನ ಕೀರ್ತಿಯನ್ನು ಹಾಡುವರೊ, ಯಾವನು ತನ್ನ ಶೌರ್ಯಾತಿರೇಕಗಳಿಂದ ಇಡೀ ಷಟ್ಖಂಡಮಂಡಲವನ್ನು ಆಳಿದನೋ, ಅವನೇ ಈ ಭರತೇಶ. ಹೀಗೆ, ಖ್ಯಾತಿವೆತ್ತ ತನ್ನ ಕೀರ್ತಿಯನ್ನು ಅವನು ಈ ವೃಷಭಾದ್ರಿಯ ಮೇಲೆ – ನೆಲವು ಇರುವವರೆಗೂ ನಿಲ್ಲುವಂತೆ – ನೆಲೆಗೊಳಿಸಿದನು’ ಎಂಬ ಅರ್ಥದ ಶಾಸನವನ್ನು ಬರೆಯಿಸುತ್ತಾನೆ.

ಹೀಗೆ ಶಾಸನವನ್ನು ಬರೆಸಿ, ಆ ನಂತರ ಭರತನು ತನ್ನ ವಿಜಯಯಾತ್ರೆಯನ್ನು ಮುಂದುವರೆಸಿದನು. ಮುಂದೆ ಕೂಡ ಹಲವಾರು ರಾಜ್ಯಗಳನ್ನು ಜಯಿಸಿ, ಕೊನೆಗೆ ರಾಜಧಾನಿಯಾದ ಅಯೋಧ್ಯೆಯ ಕಡೆಗೆ ನಡೆಯಿತು – ಭರತನ ಸೈನ್ಯ. ಆದರೆ, ಅಲ್ಲಿಯವರೆಗೂ ಇವರಿಗೆ ಮಾರ್ಗದರ್ಶಕವಾಗಿ ಮುನ್ನಡೆಯುತ್ತಿದ್ದ ಚಕ್ರರತ್ನವು ಅಯೋಧ್ಯೆಯ ಪ್ರವೇಶದ್ವಾರದಿಂದ ಮುಂದುವರೆಯದೆ ನಿಂತುಬಿಟ್ಟಿತು.
ಭರತನ ಪರಿವಾರದವರಿಗೆ ಆಶ್ಚರ್ಯ! ಚಕ್ರವು ಹೀಗೆ ಏಕಾಏಕಿ ನಿಂತದ್ದೇಕೆಂದು. ಅವರು ಭರತನಲ್ಲಿಗೆ ಬಂದು ಈ ಸಂಗತಿಯನ್ನು ನಿವೇದಿಸಿದರು.

(ಮುಂದುವರೆಯುವುದು…)Home Forums ಬಾಹುಬಲಿಯ ಕತೆ

This topic contains 0 replies, has 1 voice, and was last updated by  Lokesh Acharya 3 months ago.

You must be logged in to reply to this topic.