Photo: Puneeth Verma

ಮಹತ್ತರನು ಪೌದನಪುರದಿಂದ ಹೊರಟುಬಂದು, ಭರತನಿಗೆ ನಡೆದುದೆಲ್ಲವನ್ನೂ ವಿವರಿಸಿ ಹೇಳಿದನು. ಯುದ್ಧವು ನಡೆಯಲೇಬೇಕೆಂಬುದನ್ನು ಭರತನೂ ಮನಗಂಡು, “ಸರಿ, ಸಮರರಂಗದಲ್ಲಿ ನನ್ನ ಶತ್ರುವಿನ ತೋಳ್ಬಲವನ್ನು ಕಾಣೋಣ” ಎಂದು ತೀರ್ಮಾನಿಸಿ, ತನ್ನಯ ಸೈನ್ಯದೊಡನೆ ಪೌದನಪುರದೆಡೆಗೆ ಹೊರಟನು. ಇತ್ತ ಬಾಹುಬಲಿಯ ಸೈನ್ಯವೂ ಯುದ್ದಕ್ಕೆ ಸಜ್ಜಾಗತೊಡಗಿತು.

ಎರಡು ಮಹಾಸಮುದ್ರಗಳು ಒಂದಕ್ಕೊಂದು ಅಪ್ಪಳಿಸಲು ಬರುತ್ತಿರುವಂತೆ ಭರತ-ಬಾಹುಬಲಿಯರ ಚತುರಂಗ ಬಲಗಳೂ ಪರಸ್ಪರ ಎದುರಾದುವು. ಎರಡೂ ಕಡೆಯಲ್ಲೂ ಬಗೆಬಗೆಯ ರಣಕಹಳೆಗಳು ಮೊಳಗಿದವು. ಆನೆಗಳು ನಡೆಯುವಾಗ ಉಂಟಾದ ಘಂಟಾನಾದದಿಂದಲೂ, ಕುದುರೆಗಳ ಗೊರಸಿನ ಶಬ್ದದಿಂದಲೂ, ಸಮರೋನ್ಮತ್ತರಾದ ವೀರಭಟರ ಕೂಗು ಕೇಕೆಗಳಿಂದಲೂ ಆ ರಣರಂಗವು ತುಂಬಿಹೋಯಿತು. ಮುಂದೆ, ರಥಿಕರು ಪರಸ್ಪರ ಪ್ರಯೋಗಿಸಿದ ಬಾಣಗಳು ಒಂದಕ್ಕೊಂದು ತಾಕುವಷ್ಟು ಸಮೀಪಕ್ಕೆ ಎರಡೂ ಬಣಗಳು ಬಂದುನಿಂತವು. ಇನ್ನೇನು ಯುದ್ಧವು ತೊಡಗಬೇಕು, ಆಗ ಉಭಯಪಕ್ಷಗಳ ಮಂತ್ರಿಗಳಿಗೂ ಯೋಚನೆಯೊಂದು ಹೊಳೆಯಿತು: “ಭರತ ಬಾಹುಬಲಿಗಳಿಬ್ಬರೂ ಚರಮದೇಹಿಗಳು*. ಇವರ ನಡುವಿನ ಯುದ್ಧವೆಂದರೆ ಅದು ಬರಿ ಪ್ರಜಾವಿನಾಶಕವಷ್ಟೆ. ಚತುರಂಗಗಳೂ ಇದರಲ್ಲಿ ಪಾಲ್ಗೊಂಡರೆ ಕೇವಲ ಯುದ್ಧವಾಗುತ್ತದೆಯಷ್ಟೆ ಹೊರತು ಅದರಲ್ಲಿ ಯಾವ ಸೋಲೂ ಗೆಲುವೂ ಇರುವುದಿಲ್ಲ. ಎಲ್ಲ ಜನರನ್ನೂ ಕೊಂದಿಕ್ಕುವ ಅಂತಹ ಯುದ್ಧಕ್ಕಿಂತ ಧರ್ಮಯುದ್ಧವೇ ಮೇಲಲ್ಲವೇ?” – ಹೀಗೆಂದು ಆಲೋಚಿಸಿ, ಅವರೀರ್ವರೂ ಭರತ-ಬಾಹುಬಲಿಯನ್ನು ಧರ್ಮಯುದ್ಧಕ್ಕೆ ಒಪ್ಪಿಸಲು ಉದ್ಯುಕ್ತರಾದರು.

“ಜಯಮಂ ಕೈಕೊಳ್ವುದು ದೃ
ಷ್ಟಿಯುದ್ಧ ಜಲಯುದ್ಧ ಮಲ್ಲಯುದ್ಧದೊಳೆ ಜನ
ಕ್ಷಯಕರಣದೊಳೇಂ ಪಾಪಮು
ಮಯಶಮುಮಪ್ಪನಿತೆ ದೇವ ಕಡೆಗಣಿಪುದಿದಂ”

–೧೪.೧೦೧

‘ಸ್ವಾಮಿ, (ನಿಮ್ಮಿಬ್ಬರ ನಡುವಿನ) ದೃಷ್ಟಿಯುದ್ಧ, ಜಲಯುದ್ಧ, ಮಲ್ಲಯುದ್ಧಗಳಿಂದಲೇ ಜಯವು ಕೈಗೂಡುತ್ತದೆ. ಅದರ ಬದಲಾಗಿ ಜನಕ್ಷಯಕಾರಕವಾದ (ಚತುರಂಗಬಲದ) ಯುದ್ಧದಿಂದ ಪಾಪವೂ ಅಪಯಶಸ್ಸೂ ಪ್ರಾಪ್ತವಾಗುತ್ತದೆ. ಆದ್ದರಿಂದ ಆ ಯೋಚನೆಯನ್ನು ತೊರೆದು ಧರ್ಮಯುದ್ಧಕ್ಕೆ (ದ್ವಂದ್ವ ಯುದ್ಧ) ಒಪ್ಪಿಗೆ ಸೂಚಿಸಿ’ ಎಂದು ಭರತನನ್ನೂ ಬಾಹುಬಲಿಯನ್ನೂ ಬೇಡಿ, ಅವರಿಬ್ಬರನ್ನೂ ಇದಕ್ಕೆ ಒಪ್ಪಿಸಿದರು.
ಇನ್ನು ಯುದ್ಧವೇನಿದ್ದರೂ ಭರತ-ಬಾಹುಬಲಿ, ಇವರಿಬ್ಬರ ನಡುವೆಯಷ್ಟೇ. ಕ್ರಮವಾಗಿ ದೃಷ್ಟಿಯುದ್ಧ, ಜಲಯುದ್ಧ ಹಾಗೂ ಮಲ್ಲಯುದ್ಧ – ಇವುಗಳೆಲ್ಲದರಲ್ಲಿ ಗೆದ್ದವರೇ ಅವರಿಬ್ಬರ ಪೈಕಿ ವಿಜಯಶಾಲಿಗಳು.

ನೀಲಶೈಲವೂ ನಿಷಧಶೈಲವೂ ಒಂದಕ್ಕೊಂದು ಎದುರಾದಂತೆ ಭರತ-ಬಾಹುಬಲಿಯರು ಎದುರಾದರು. ದೃಷ್ಟಿಯುದ್ಧಕ್ಕೆ ತೊಡಗಿತು; ಆದರೆ, ಬಾಹುಬಲಿಯ ತೇಜೋರಾಶಿಯನ್ನೆದುರಿಸಲಾರದೆ ಭರತನು ತನ್ನ ಕಣ್ಣುಗಳನ್ನು ಮುಚ್ಚಿಕೊಂಡನು (ಸೋತುಹೋದನು). ಮುಂದೆ ಜಲಯುದ್ಧದಲ್ಲಿಯೂ ಭರತನು ಪರಾಭವನ್ನನುಭವಿಸಿದನು. ಮುಂದೆ ಕೊನೆಯ ಯುದ್ಧ – ಮಲ್ಲಯುದ್ಧ.
ಇಬ್ಬರೂ ತಮ್ಮ ಪಟ್ಟು, ಕೈಚಳಕಗಳನ್ನು ಪ್ರದರ್ಶಿಸುತ್ತ ಮಲ್ಲಯುದ್ಧಕ್ಕೆ ತೊಡಗಿದರು. ಇದರಲ್ಲಿಯೂ ಸಹ, ಬಾಹುಬಲಿಯು ಭರತನನ್ನು ಸುಲಭವಾಗಿ ಮಣಿಸಿ, ಅವನನ್ನು ಅನಾಯಾಸವಾಗಿ ಎತ್ತಿಕೊಂಡು ನಿಂತನು.

ಕನಕಾಚಳಮಂ ಪೊತ್ತುದು
ಘನಮರಕತಶೈಲಮೆನಿಸಿ ಭುಜಬಲಿ ಸಕಳಾ
ವನಿತಳವಲ್ಲಭನಂ ಭೋಂ
ಕನೆತ್ತಿ ಪೊತ್ತಿರ್ದನಿಕ್ಕಲೊಲ್ಲದೆ ನೆಲದೊಳ್

–೧೪.೧೧೧

ಸಾಂದ್ರವಾದ ಮಣಿಶೈಲವು ಕನಕಶೈಲವನ್ನು ಹೊತ್ತಿನಿಂತಿತೋ ಎನಿಸುವಂತೆ ಬಾಹುಬಲಿಯು ಸರ್ವಭೂಮಿಗೊಡೆಯನಾದ ಭರತನನ್ನು ಎತ್ತಿಕೊಂಡು, ಅವನನ್ನು ನೆಲದಮೇಲೆ ಎಸೆಯಲು/ಕುಕ್ಕಲು ಮನಸ್ಸು ಬಾರದೆ ಹೊತ್ತುಕೊಂಡೇ ನಿಂತನು.

ಭರತಾವನೀಶ್ವರಂ ಗುರು
ಪಿರಿಯಣ್ಣಂ ಚಕ್ರವರ್ತಿ ಮಹಿಮಾಕರನೀ
ದೊರೆಯನುಮಳವೞಿಯೆ ವಸುಂ
ಧರೆಯೊಳ್ ತಂದಿಕ್ಕಿ ಭಂಗಮಂ ಮಾಡುವೆನೇ

–೧೪.೧೧೨

ಎಂದೊಯ್ಯನಿೞಿಪೆ ನೆಲದೊಳ್
ದುಂದುಭಿರವದೊಡನೆ ವಿಜಯಘೋಷಣೆ ನೆಗೞ್ದ
ತ್ತಂದು ಭುಜಬಲಿಯ ಬಲದೊಳ್
ಕುಂದು ಕರಂ ಪಿರಿದುಮಾಯ್ತು ಭರತನ ಬಲದೊಳ್

–೧೪.೧೧೩

“ಭರತನು ನನ್ನ ಹಿರಿಯಣ್ಣ, ಗುರು ಸಮಾನನು, ಚಕ್ರವರ್ತಿ, ಮಹಿಮಾನ್ವಿತನಾದವನು. ಅಂತಹವನೂ ಇಂದು ಶಕ್ತಿಗುಂದಿರುವನೆಂದು, ನೆಲಕ್ಕೆ ಅಪ್ಪಳಿಸಿ ಅವನಿಗೆ ಭಂಗವನ್ನು ಮಾಡಲಾದೀತೆ” ಎಂದು ಯೋಚಿಸಿ, ಬಾಹುಬಲಿಯು ಭರತನನ್ನು ಅತಿ ಜಾಗ್ರತೆಯಿಂದ ಮೆಲ್ಲನೆ ನೆಲದ ಮೇಲಿಳಿಸಿದನು. ಆಗ, ಅತ್ತ ಬಾಹುಬಲಿಯ ಸೈನ್ಯವು ದುಂದುಭಿ ಧ್ವನಿಯೊಡನೆ ವಿಜಯಘೋಷಣೆ ಮಾಡಿ, ಹರ್ಷವನ್ನು ವ್ಯಕ್ತಪಡಿಸಿತು. ಇತ್ತ, ಭರತನ ಸೈನ್ಯವು ಪರಾಭವದಿಂದ ಕಳೆಗುಂದಿತು.

ಎಲ್ಲರೆದುರು ತನಗೆ ಹೀಗೆ ಸೋಲುಂಟಾದುದನ್ನು ನೆನೆದು ಭರತನಲ್ಲಿ ರೋಷವು ಕೆರಳಿ, ಕಡೆಯ ಪ್ರಯತ್ನವೆಂಬಂತೆ – ಅವನು (ಸುದರ್ಶನ) ಚಕ್ರರತ್ನವನ್ನು ಬಾಹುಬಲಿಯ ಕಡೆಗೆ ಪ್ರಯೋಗಿಸಿದನು. ಅದು ಭರತನ ಅಪ್ಪಣೆಯನ್ನು ವಿರೋಧಿಸದೆ ಬಾಹುಬಲಿಯ ಕಡೆಗೆ ಬಂದು, ಅವನನ್ನು ಪ್ರದಕ್ಷಿಣೆಯನ್ನು ಮಾಡಿ, ಅವನ ಪಕ್ಕದಲ್ಲಿ ಶಕ್ತಿಹೀನವಾಗಿ ನಿಂತಿತು. ಆಗ ಭರತನಿಗೆ ತನ್ನ ತಪ್ಪಿನ ಅರಿವಾಗಿ, ‘ತನ್ನ ಅಂತಸ್ತಿಗೆ ತಕ್ಕುದಲ್ಲದ ಕೆಲಸವನ್ನು ಭರತನು ಮಾಡಿದ’ನೆಂಬ ಕುಲವೃದ್ಧರ, ರಾಜರ ಮಾತುಗಳಿಗೆ ಹೆದರಿ, ತಲೆಬಾಗಿ ನಿಂತನು.

ಇತ್ತ, ಬಾಹುಬಲಿಯಲ್ಲಿಯೂ ಮನಃಪರಿವರ್ತನೆಯಾಯಿತು. “ಅಹೋ! ಚಂಚಲವಾದ ಈ ರಾಜ್ಯವ್ಯಾಮೋಹವನ್ನು ತೊರೆಯುವುದು ಬಹಳ ಕಷ್ಟ. ಮನುಕುಲತಿಲಕನಾದ ಭರತನೇ ಇದರ ವ್ಯಾಮೋಹದಲ್ಲಿ ಮುಳುಗಿದನೆಂದಮೇಲೆ ಮತ್ತಿನ ರಾಜರ ಕಥೆ ಇನ್ನೆಂತು. ಈ ರಾಜ್ಯ ಮೋಹವು ಅಣ್ಣ-ತಮ್ಮಂದಿರ ನಡುವೆಯೂ, ತಂದೆ-ಮಕ್ಕಳ ನಡುವೆಯೂ ಜಗಳವನ್ನು ತಂದಿಡಲು ಸಮರ್ಥವಾದುದು. ಆದ್ದರಿಂದ, ನಾಶಕಾರಕವಾದ ಈ ರಾಜ್ಯಸುಖಕ್ಕೆ ಆಸೆಪಡದೆ, ನಾನು ಕೂಡ ನನ್ನ ಇತರ ಸೋದರರಂತೆ ಜೈನದೀಕ್ಷೆಯನ್ನೇ ಕೈಗೊಳ್ಳುವೆ”ನೆಂದು ನಿಶ್ಚಯಿಸಿದನು.

ಅವನು ಭರತನನ್ನು ಕುರಿತು “ಚಕ್ರೇಶ, ಲಜ್ಜೆಯನ್ನು ಬಿಡು, ಇನ್ನು ನನ್ನ ಮೇಲೆ ಯಾವ ಮುನಿಸನ್ನೂ ತಳೆಯದಿರು. ತಮ್ಮಂದಿರೊಡನೆ ಹೀಗೆ ನಿಗ್ರಹಬುದ್ಧಿಯನ್ನು ತಳೆಯುವುದೇನು ಹಿರಿಮೆಯೇ?” ಎಂದು ನುಡಿದು, ಮುಂದೆ:

‘ನೆಲಸುಗೆ ನಿನ್ನ ವಕ್ಷದೊಳೆ ನಿಚ್ಚಳಮೀಭಟಖಡ್ಗಮಂಡಲೋ
ತ್ಪಲವನವಿಭ್ರಮಭ್ರಮರಿಯಪ್ಪ ಮನೋಹರಿ ರಾಜ್ಯಲಕ್ಷ್ಮಿ ಭೂ
ವಲಯಮನಯ್ಯನಿತ್ತುದುಮನಾಂ ನಿನಗಿತ್ತೆನಿದೇವುದಣ್ಣ ನೀ
ನೊಲಿದ ಲತಾಂಗಿಗಂ ಧರೆಗಮಾಟಿಸಿದಂದು ನೆಗೞ್ತೆ ಮಾಸದೇ?

ಅವಧರಿಸದೆ ನಿನ್ನೊಳ್ ಪಿರಿ
ದವಿನಯಮಂ ನೆಗೞ್ದ ದೋಷಮಂ ತಪದೊಳ್ ನೀ
ಗುವೆನಸದಾಗ್ರಹಮಂ ಬಿಸು
ಡುವುದೊರ್ಮೆಗೆ ಮಱೆವುದೆನ್ನ ದುರ್ವಿಳಸನಮಂ’

–೧೪.೧೩೦-೧೩೧

“ಅಣ್ಣ, ವೀರಭಟರ ಖಡ್ಗಗಳೆಂಬ ಉತ್ಪಲವನದಲ್ಲಿ ದುಂಬಿಯಂತೆ ವಿಹರಿಸುವ ಮನೋಹರಿಯಾದ ರಾಜ್ಯಲಕ್ಷ್ಮಿಯು ನಿನ್ನ ಹೃದಯದಲ್ಲಿಯೆ ನಿಶ್ಚಲವಾಗಿ ನೆಲೆಸಲಿ. ತಂದೆಯು ನನಗಿತ್ತ ರಾಜ್ಯವನ್ನು ನಿನಗೇ ನೀಡುತ್ತಿದ್ದೇನೆ, ಇದನ್ನೂ ಇನ್ನು ನೀನೇ ನೋಡಿಕೊ. ನೀನು ಒಲಿದ ಹೆಣ್ಣಿಗಾಗಲೀ ಮಣ್ಣಿಗಾಗಲೀ ನಾನೂ ಆಶಿಸಿದೆನಾದರೆ ನನ್ನ ಕೀರ್ತಿಯು ಮಾಸದೇ?
ಹಿಂದೆ ನಿನ್ನ ಮಾತನ್ನು ಕೇಳದೆ, ನಿನ್ನೊಡನೆ ಅವಿನಯದಿಂದ ವರ್ತಿಸಿದ ನನ್ನ ದೋಷವನ್ನು ತಪಶ್ಚರಣೆಯಿಂದ ನೀಗಿಸುವೆ. (ನೀನು) ನನ್ನ ಬಗೆಗಿನ ಕೋಪವನ್ನು ತ್ಯಜಿಸಿ, ನನ್ನ ದುಶ್ಚೇಷ್ಟೆಯನ್ನು ಕ್ಷಮಿಸು” ಎಂದು ನುಡಿದು, ಬಾಹುಬಲಿಯು ತಪಕ್ಕೆ ಹೊರಟುನಿಂತನು.

ಭರತನು ನಾನಾ ಬಗೆಯಾಗಿ ಕಾಡಿ ಬೇಡಿದರೂ ಬಾಹುಬಲಿಯು ತನ್ನ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ತನ್ನ ತಂದೆಯಲ್ಲಿಗೆ ಹೋಗಿ, ಜಿನದೀಕ್ಷೆಯನ್ನು ಪಡೆದು, (ಏಕವಿಹಾರಿಯಾಗಿ) ಒಂದೆಡೆಯಲ್ಲಿ ತಪಸ್ಸಿಗೆ ನಿಂತನು. ನಿಶ್ಚಲವಾಗಿ ತಪಸ್ಸಿಗೆ ನಿಂತ ಬಾಹುಬಲಿಯ ಅಡಿಯಿಂದ ಹುತ್ತಗಳು ಬೆಳೆದುನಿಂತುವು. ಆ ಹುತ್ತಗಳ ತುದಿಯಿಂದ ಬೆಳೆದ ಬಳ್ಳಿಗಳು ಅವನ ದೇಹವನ್ನೂ ಹಬ್ಬಿದವು. ಆ ಹುತ್ತಗಳಲ್ಲಿ ವಾಸಿಸುವ ವಿಷಸರ್ಪಗಳೂ ಸಹ ಅವನ ಭುಜಕ್ಕೆ ಸುರುಳಿ ಸುತ್ತಿಕೊಂಡಿರುತ್ತಿದ್ದವು. ಇವಾವುದರ ಪರಿಯೂ ಇಲ್ಲದಂತೆ ಬಾಹುಬಲಿಯು ಅತ್ಯಂತ ಕಠಿಣತರದ ತಪಸ್ಸಿನಲ್ಲಿ ನಿರತನಾಗಿದ್ದನು.

ಇಷ್ಟಾದರೂ ಅವನಿಗಿನ್ನೂ ಕೇವಲಜ್ಞಾನ* ಪ್ರಾಪ್ತಿಯಾಗದುದನ್ನು ಕಂಡು ಅಚ್ಚರಿಪಟ್ಟು, ಭರತನು ಆದಿದೇವನಲ್ಲಿ ಈ ಬಗ್ಗೆ ವಿಚಾರಿಸಿದನು. ಅದಕ್ಕೆ ಆದಿದೇವನು “ನಿನ್ನ ನೆಲದೊಳ್ ನಿಂದೆವೆಂಬ ಮಾನಕಷಾಯಂ ಅವರ್ಗಿನ್ನುಂ ಪತ್ತುವಿಟ್ಟುದಲ್ತು; ಅದಱಿಂ ಕೇವಲಜ್ಞಾನೋತ್ಪತ್ತಿಯಾಗದಿರ್ದುದು. ನೀಂ ಪೋಗಿ ಕಾಲ್ಗೆಱಗಲೊಡಂ ಕೇವಲಜ್ಞಾನಮಕ್ಕುಂ” ಎಂದು ಬೆಸಸಿದನು.

ಸರಿ, ಭರತನು ತನ್ನ ಪರಿವಾರವರೊಡನೆ ಬಾಹುಬಲಿಯಿದ್ದೆಡೆಗೆ ಬಂದು, ಅವನನ್ನು ವಿಧವಿಧವಾದ ಅರ್ಚನೆಗಳಿಂದ ಪೂಜಿಸಿ:

‘ನಿನ್ನ ಮಡುಗೂೞ್ನೆಲಂ ಮಾ
ನೋನ್ನತ ನೀನೀಯೆ ಬಂದುದೆನಗಿದನೆನತೆಂ
ದೇನ್ನಿನಗೆ ಬಗೆಯಲಪ್ಪುದೆ
ನಿನ್ನನೆ ನೀಂ ಬಗೆಯ ಬಗೆಯದಿರ್ ಪೆಱಪೆಱತಂ’

–೧೪.೧೪೪

“ಮಾನೋನ್ನತ! ಈ ನೆಲವು ನಿನ್ನ ಎಂಜಲು. ನೀನು ಕೊಟ್ಟುದರಿಂದಷ್ಟೆ ಅದು ನನಗೆ ಬಂದಿತು. ಹಾಗಿದ್ದೂ ಇದು (ಭರತ) ನನ್ನದೆಂದು ನೀನು ಬಗೆಯಬಹುದೆ? ನಿನ್ನ ಬಗೆಯನ್ನಷ್ಟೆ ನೀನು ಧ್ಯಾನಿಸು, ಮಹಾತ್ಮಾ. ಬೇರೆ ಇನ್ನಾವ ವಿಷಯವನ್ನೂ ಯೋಚಿಸದಿರು” ಎಂದು ಪ್ರಾರ್ಥಿಸಿ, ಭರತನು ಬಾಹುಬಲಿಯ ಪಾದಕ್ಕೆರಗಿದನು.
ಅಲ್ಲಿಯವರೆಗೂ ಬಾಹುಬಲಿಯ ಚಿತ್ತದಲ್ಲಿ ನೆಲೆಸಿದ್ದ ಆ ಮಾನಕಷಾಯವೂ ಕರಗಿಹೋದುದರಿಂದ, ಕೂಡಲೆ ಅವನಿಗೆ ಕೇವಲಜ್ಞಾನಬೋಧೆಯಾಯಿತು. ಆಗ, ಇಂದ್ರಾದಿ ದೇವತೆಗಳೆಲ್ಲ ಅಲ್ಲಿಗೆ ಬಂದು ನೆರೆದು ಬಾಹುಬಲಿಯನ್ನು ಸಿಂಹಾಸನಕ್ಕೇರಿಸಿ ಪೂಜಿಸಿದರು.

ಮುಂದೆ ಬಾಹುಬಲಿಯು ದೇಶದೇಶಗಳಲ್ಲಿ ಸಂಚರಿಸಿ, ಭವ್ಯಜನರಿಗೆ ಉಪದೇಶ ನೀಡಿ ಅವರನ್ನು ಪುನೀತರನ್ನಾಗಿ ಮಾಡಿ, ಕೊನೆಗೆ ಕೈಲಾಸಗಿರಿಗೆ ಬಂದು ನೆಲೆಸಿದನು.

 

ಟಿಪ್ಪಣಿ:
*೧: ಚರಮದೇಹ: ಮುಕ್ತಿಯನ್ನು ಹೊಂದಲಿರುವ ಆತ್ಮದ ಕೊನೆಯ ಭವದ(ಜನ್ಮದ) ದೇಹ
*೨: ಕೇವಲಜ್ಞಾನ: ಘಾತಿಕರ್ಮಗಳು ನಾಶವಾದ ಬಳಿಕ ಹುಟ್ಟುವ ಉತ್ಕೃಷ್ಟವಾದ ಜ್ಞಾನ. ಈ ಸಮಯದಲ್ಲಿ ದೇವೇಂದ್ರನು ದೇವತೆಗಳೊಡನೆ ಬಂದು ಜಿನರನ್ನು ಪೂಜಿಸಿ ಆನಂದೋತ್ಸವವನ್ನು ನಡೆಸುತ್ತಾನೆ

Home Forums ಬಾಹುಬಲಿಯ ಕತೆ – ೩

This topic contains 0 replies, has 1 voice, and was last updated by  Lokesh Acharya 2 months, 2 weeks ago.

You must be logged in to reply to this topic.