ಅಲ್ಲಿಯವರೆಗೂ ಅಸ್ಖಲಿತ ಗತಿಯಲ್ಲಿ -ಭರತನ ಸೈನ್ಯಕ್ಕೆ ಮಾರ್ಗದರ್ಶಕವಾಗಿ- ಚಲಿಸುತ್ತಿದ್ದ ಸುದರ್ಶನ ಚಕ್ರವು ಅಯೋಧ್ಯೆಯ ದ್ವಾರದಿಂದ ಮುಂದಕ್ಕೆ ಸಾಗದೆ ನಿಂತ ವಿಷಯವನ್ನು ಕೇಳಿ ಭರತನಿಗೂ ಅಚ್ಚರಿಯಾಯಿತು. ಅವನು ತನ್ನ ರಾಜಪುರೋಹಿತರನ್ನು ಕುರಿತು “ಇಲ್ಲಿಯವರೆಗೂ ದಿಕ್ಕುದಿಕ್ಕುಗಳಲ್ಲಿಯೂ – ಯಾವುದೇ ತೊಡರಿರದೆ – ನಮ್ಮನ್ನು ಮುನ್ನಡೆಸಿದ ಈ ರತ್ನವು ಈಗ ಹೀಗೆ ನಿಂತುಬಿಡಲು ಕಾರಣವೇನಿರಬಹುದು? ಇದು ಇನ್ನೂ ನನಗೆ ಶತ್ರುಗಳಿರುವರೆಂಬ ವಿಷಯವನ್ನು ಸೂಚಿಸುತ್ತಿದೆಯೇ? ಆಹಾ! ಯಮನ ಬಾಯನ್ನು ಹೊಗಲು ಅದಾವನು ಬಯಸುತ್ತಿರುವನೋ?” ಎಂದು ಹೇಳಿದನು.

ಪುರೋಹಿತರು, “ರಾಜನ್, ತಮಗೆ ತಿಳಿಯದ್ದೇನಿದೆ. ನೀವು ಇದಕ್ಕೆ ಕಾರಣವನ್ನು ಸರಿಯಾಗಿಯೇ ಊಹಿಸಿದ್ದೀರಿ. ಖಚಿತವಾಗ್ಯೂ ಇದು ನಿಮಗೆ ಶತ್ರುಗಳಿದ್ದಾರೆಂಬುದನ್ನು ಸೂಚಿಸುತ್ತದೆ. ಇಲ್ಲಿಯವರೆಗೂ ತಾವು ಪರಮಂಡಲವನ್ನು ಜಯಿಸಿ ಬಂದಿರುವಿರಿ. ಈಗಲಾದರೊ, ಅಂತರ್ಮಂಡಲವನ್ನೂ ಒಮ್ಮೆ ಶೋಧಿಸಿ ನೋಡಬೇಕಿದೆ.
‘ಅವನೂ ಪುರುರಾಜನ ಮಗನೇ, ನಾವೂ ಪುರುರಾಜನ ಮಕ್ಕಳೇ. ನಮಗೆಲ್ಲರಿಗೂ ತಂದೆಯೇ ತನ್ನ ರಾಜ್ಯವನ್ನು ಹಂಚಿಕೊಟ್ಟಿದ್ದಾನೆ. ಹಾಗಿರುವಾಗ, ಅವನಿಗೆ ನಾವು ಅಧೀನರಾಗಿರಬೇಕಾದ ಅಗತ್ಯವೇನಿದೆ?’ ಎಂದು ನಿನ್ನ ಎಲ್ಲ ತಮ್ಮಂದಿರ ಯೋಚನೆ. ಹಾಗಾಗಿ ಅವರು ಎಂದೂ ನಿನಗೆ ವಿಧೇಯರಾಗಿರಲು, ನಿನ್ನ ಸಾರ್ವಭೌಮತ್ವವನ್ನು ಒಪ್ಪಿ ನಡೆಯಲು ಒಡಂಬಡುವುದಿಲ್ಲ. ಅದರಲ್ಲಿಯೂ ಅಧಿಕ ಮಾನಧನನಾದ ಬಾಹುಬಲಿಯು ನಿಮಗೆಂದೂ ಶರಣಾಗನು. ಹೀಗಿರುವುದರಿಂದಲೇ ಚಕ್ರರತ್ನವು ನಿಂತುಹೋದುದು” ಎಂದು ಬಿನ್ನವಿಸಿದರು.
ಅಷ್ಟಕ್ಕೇ ನಿಲ್ಲದೆ, “ಭರತೇಶ, ಒಂದೊ – ಅವರು ನಿಮ್ಮ ಪಾದಗಳಿಗೆ ಎರಗಿ, ನಿಮಗೆ ವಿಧೇಯರಾಗಿ ನಡೆದುಕೊಳ್ಳಲಿ; ಅಥವಾ ಪುರುರಾಜರ ಪಾದಕ್ಕೆರಗಿ ತಪದೀಕ್ಷೆಯನ್ನು ಕೈಗೊಳ್ಳಲಿ. ನಿಮ್ಮ ಬಗೆಗಿನ ಭಯಭಕ್ತಿಗಳಿಂದ ಕೂಡಿ ಅವರು ನಿಮ್ಮ ಆಸ್ಥಾನಕ್ಕೆ ಬರಬೇಕು ಅಥವಾ ಕಾಡು ಸೇರಬೇಕು. ಇವೆರಡರ ಹೊರತು ಬೇರೆಲ್ಲಿ ಹೊಗಲೂ ಅವರಿಗೆ ತಾಣವಿಲ್ಲದಂತಾಗಲಿ. ಈ ಸಂಗತಿಯನ್ನು ತಾವು ದೂತರ ಮೂಲಕ ಅವರಿಗೆ ಹೇಳಿಕಳುಹಿಸಿ” ಎಂದು ಬೋಧಿಸಿದರು.

ಭರತನು ಇವೆಲ್ಲವನ್ನೂ ಕೇಳಿ ಕುಪಿತನಾದನು. ಕಣ್ಣುಗಳು ಕಿಡಿಕಾರುತ್ತಿರಲು, ಅವನು “ಏನೇನು, ನನ್ನ ತಮ್ಮಂದಿರಿಗೆ ನನ್ನ ಆಧಿಪತ್ಯವನ್ನು ಒಪ್ಪಲಾರದಷ್ಟು ಮದವೇರಿದೆಯೇ? ಇದು ಹೇಗೆ ಸಾಧ್ಯ!
‘ಓಹೊ, ನಾವೆಲ್ಲ ಸೋದರರಾದ್ದರಿಂದ ನಮ್ಮನ್ನೇನು ಅವನು ಕೊಂದುಬಿಡುವುದಿಲ್ಲ’ ಎಂದುಕೊಂಡಿದ್ದಾರೊ ಹೇಗೆ? ಕೊಲ್ಲದಿದ್ದರೇನಂತೆ, ಅವರನ್ನೆಲ್ಲ ಯುದ್ಧದಲ್ಲಿ ಸೋಲಿಸಲು ಸಾಧ್ಯವಿಲ್ಲವೆ; ಸ್ವಂತ ತಮ್ಮಂದಿರೇ ಎರಗದೆ ಹೋದರೆ ಮತ್ತೆಲ್ಲ ಅರಸುಗಳು ನನಗೆ ಎರಗಿದರೂ ಅದರಿಂದ ಬಂದ ಭಾಗ್ಯವೇನು! ಬಾಹುಬಲಿಯೇನೂ ಇದಕ್ಕೆ ಹೊರತಲ್ಲ. ಪೌದನಪುರವೂ ನನ್ನ ಆಳ್ವಿಕೆಗೆ ಒಳಪಡದೆಹೋದರೆ ಈ ಭೂಮಂಡಲವಿಡೀ ನನ್ನ ಆಜ್ಞಾಧೀನವಾದರೂ ಪ್ರಯೋಜನವೇನು…” ಎಂದು ಕೋಪೋದ್ರಿಕ್ತನಾಗಿ ನುಡಿದನು.

ಪುರೋಹಿತರು, “ರಾಜನ್, ನಿಮ್ಮ ಒಂದು ಪತ್ರದಿಂದ ಈ ವಿಷಯಗಳನ್ನೆಲ್ಲ ಇತ್ಯರ್ಥ ಮಾಡಿಕೊಳ್ಳಲು ಸಾಧ್ಯವಿದೆ. ಸುಮ್ಮನೆ ಮನೆಯ ಜಗಳವನ್ನು ಹಿರಿದುಮಾಡುವುದೇಕೆ?” ಎಂದು ಸಲಹೆಯನ್ನಿತ್ತರು.
ಸರಿ, ಈ ವಿಷಯವಾಗಿ ಭರತನು ಬರೆಸಿದ ಪತ್ರವನ್ನು ಹೊತ್ತ ದೂತರು ಅವನ ತಮ್ಮಂದಿರ ಬಳಿಗೆ ಹೋದರು.

“ಎನಗೊರ್ವಂಗುಪಭೋಗ್ಯಮಲ್ತು ವಸುಧಾಸಾಮ್ರಾಜ್ಯಮೋರಂತೆ ನಿ
ಮ್ಮನಿಬರ್ಗಂ ಪಿರಿಯಣ್ಣನೇಂ ಜನಕನೇನೆಂಬೊಂದು ಕೊಂಡಾಟದಿಂ
ವಿನಯಂ ಸಲ್ವುದು ತಾಮುಮಾಮುಮೊಡನಿರ್ಪಂ ಬರ್ಪುದೆಂಬೀಶಶಾ
ಸನಮಂ ನೆತ್ತಿಯೊಳಾಂತು ಬನ್ನಿಮೆಱಗಿಂ ಚಕ್ರೇಶ ಪಾದಾಬ್ಜದೊಳ್”     

-ಆದಿಪುರಾಣ ೧೪.೩೧

“‘ಈ ಸಮಸ್ತ ಸಾಮ್ರಾಜ್ಯವೂ ನನಗೊಬ್ಬನಿಗಷ್ಟೆ ಉಪಭೋಗ್ಯವಲ್ಲ. ಇದು ನಿಮಗೆಲ್ಲರಿಗೂ ಸಲ್ಲುತ್ತದೆ. ಹಿರಿಯಣ್ಣನೇನು ತಂದೆಯೇನು – ಇಬ್ಬರೂ ಸಮಾನವಾಗಿ ಗೌರವಕ್ಕೆ ಅರ್ಹರು ಎಂಬುದನ್ನು ನೆನೆದು, (ನನ್ನಲ್ಲಿ) ವಿನಯವನ್ನು ತಳೆಯಿರಿ. ನಾನೂ ನೀವೂ ಒಟ್ಟಿಗೇ ಇದ್ದು ಬಾಳೋಣ’ ಎಂಬ ಒಕ್ಕಣೆಯಿರುವ ಈ ಶಾಸನಪತ್ರವನ್ನು ನೆತ್ತಿಯ ಮೇಲೆ ಹೊತ್ತುಬಂದು ಭರತ ಚಕ್ರೇಶನ ಪಾದಗಳಿಗೆ ಎರಗಿರಿ”

ಭರತನ ತಮ್ಮಂದಿರಿಗೆ ಈ ಪತ್ರವನ್ನು ನೋಡಿ ವ್ಯಥೆಯಾಯಿತು. ಅವರು “ಹಿರಿಯಣ್ಣನು ಗುರು ಸಮಾನನು, ತಂದೆಗೆ ಸಮಾನನು. ಹಾಗಾಗಿ ಅವನಿಗೆ ನಮಿಸುವುದು ಯುಕ್ತವೇ. ಮುಂಚೆಯೆಲ್ಲ ನಾವು ಅವನೊಡನೆ ಹಾಗೆಯೇ ನಡೆದುಕೊಂಡೆವಲ್ಲ! ಆದರೆ ಈಗಲೊ (ಈ ಪತ್ರದಿಂದ), ಆಳು-ಅರಸ ಎಂಬ ವಿಭೇದ ತಲೆದೋರಿದೆ. ಅಯ್ಯೊ! ಕಷ್ಟವಲ್ಲವೇ. ಈ ಮುಂಚೆ ನಮ್ಮ ತಂದೆಯೇ ನಮಗೆಲ್ಲ ಈ ಭೂಮಿಯನ್ನು ವಹಿಸಿಕೊಟ್ಟರು. ಆದರೆ ಅದೇ ಭೂಮಿಗಾಗಿ ನಾವೀಗ ಭರತನಿಗೆ ಕಿಂಕರರಾಗುವುದು ‘ಅಕ್ಕಿಗೊಟ್ಟು ಮಡುಗೂಳನ್ನು ಉಂಡಂತಾಗುವುದಿಲ್ಲವೇ’ (ಚೆನ್ನಾದ ಅಕ್ಕಿಯನ್ನು ಕೊಟ್ಟು, ಎಂಜಲನ್ನವನ್ನು ಪಡೆದು ಉಂಡಂತೆ)” ಎಂದು ಯೋಚಿಸಿದರು.
ಪುರುಷಾರ್ಥವನ್ನೂ, ಶಾಶ್ವತ ಕೀರ್ತಿಯನ್ನೂ ನೆನೆದಾಗ ಅವರಿಗೆ ಪರಾಧೀನತೆಯಿಂದ ಲಭಿಸುವ ರಾಜ್ಯಸುಖವು ಪೊಳ್ಳಿನ ಹೊರೆಯಂತೆ ತೋರಿತು. ಹಾಗಾಗಿ ಅವರು ತಮ್ಮತಮ್ಮ ರಾಜ್ಯಗಳನ್ನು ತೊರೆದುಬಿಡಲು ನಿಶ್ಚೈಸಿದರು. ಅವರೆಲ್ಲ ಒಟ್ಟಾಗಿ ಆದಿನಾಥನಿದ್ದಲ್ಲಿಗೆ ಹೋದರು.

“ತಂದೆ, ನೀನು ಕೊಡಲು ನಾವು ಭೂಮಂಡಲವನ್ನು ಪಡೆದು ಇಲ್ಲಿಯವರೆಗೂ ಪಾಲಿಸಿದೆವು. ಆದರೆ ಈಗಲೊ, ಅದೇ ಭೂಮಿಗಾಗಿ – ಜೊತೆಯಲ್ಲಿ ಹುಟ್ಟಿದ ಅಣ್ಣ – ಭರತನು ‘ನನ್ನ ಕಾಲುಗಳಿಗೆರಗಿ’ ಎಂದು ಬೆದರಿಸುತ್ತಿದ್ದಾನೆ. ಪರಮಾತ್ಮ, ನಿನ್ನ ಪಾದಗಳಿಗೆರಗಿದ ನಾವು -ಭೂಮಿಗಾಗಿ- ಇನ್ನೊಬ್ಬರ ಪಾದಗಳಿಗೆರಗಲು ಸಾಧ್ಯವೇ? ಆದ್ದರಿಂದ ಈಗಲೆ ನಮಗೆಲ್ಲ ತಪೋದೀಕ್ಷೆಯನ್ನು ದಯಪಾಲಿಸು” ಎಂದು ಬೇಡಿಕೊಂಡರು. ಹಾಗೆ, ಆದಿನಾಥನಿಂದ ನಿಜದೀಕ್ಷೆ ಪಡೆದು ಅವರೆಲ್ಲ ತಪೋನಿರತರಾದರು.

ಈ ಸಂಗತಿಯೆಲ್ಲ ಭರತನಿಗೆ ತಿಳಿದು, ತನ್ನ ತಮ್ಮಂದಿರ ಬಗೆಗೆ ಅವನಿಗೂ ಹೆಮ್ಮೆಯೂ ಮೆಚ್ಚುಗೆಯೂ ಆಯಿತು. ಆದರೇನು, ತಾನಿನ್ನೂ ಪೂರ್ಣಪ್ರಮಾಣದ ಚಕ್ರವರ್ತಿಯಾಗಲಿಲ್ಲವಲ್ಲ! ಅದಕ್ಕೆ ಅಡ್ಡಿಯಾಗಿ ಬಾಹುಬಲಿಯಿದ್ದಾನೆ. ಅವನ ವಿವಾದವನ್ನೂ ಹೇಗಾದರೂ ಬಗೆಹರಿಸಿಕೊಳ್ಳಬೇಕು!
ಭರತನು ಚತುರೋಪಾಯಗಳನ್ನೂ ನೆನೆದು, ಮೊದಲಿಗೆ ಸಾಮದಿಂದ ಬಾಹುಬಲಿಯನ್ನು ಸಂತಯಿಸಲು ನಿಶ್ಚಯಿಸಿದನು. ಅವನು ಮಹತ್ತರನೆಂಬ ಸಂಧಿವಿಗ್ರಹಿಯನ್ನು ಕರೆಸಿ, ಅವನಿಗೆ ಎಲ್ಲವನ್ನೂ ವಿವರಿಸಿ ಹೇಳಿದನು. ಅಮೂಲ್ಯವಾದ ಉಡುಗೊರೆಗಳೊಡನೆ ಒಂದು ಪತ್ರವನ್ನೂ ಬಾಹುಬಲಿಗೆ ತಲುಪಿಸಿ, ಕಾರ್ಯವನ್ನು ಸಾಧಿಸಿಕೊಂಡು ಬರಲು ಮಹತ್ತರನನ್ನು ಪೌದನಪುರಕ್ಕೆ ಕಳುಹಿಸಿದನು.

ಮಹತ್ತರನು ಶೀಘ್ರವಾಗಿ ಪೌದನಪುರವನ್ನು ಸೇರಿ, ಬಾಹುಬಲಿಯ ಆಸ್ಥಾನಕ್ಕೆ ಬಂದನು. ಬಾಹುಬಲಿಯು ಯಥೋಚಿತವಾದ ರೀತಿಯಲ್ಲಿ ಅವನನ್ನು ಬರಮಾಡಿಕೊಂಡು, ಯುಕ್ತವಾದ ಆಸನದಲ್ಲಿ ಕುಳ್ಳಿರಲು ಸೂಚಿಸಿದನು. ಮಹತ್ತರನು ಆಗ ಭರತನು ಕಳುಹಿಸಿದ್ದ ಸಮಸ್ತ ಉಡುಗೊರೆಗಳನ್ನೂ, ಅದರೊಡನೆ ತಂದ ಪತ್ರವನ್ನೂ ಆಸ್ಥಾನಕ್ಕೊಪ್ಪಿಸಿದನು. ಪತ್ರವನ್ನು ಪಡೆದುಕೊಂಡ (ಪೌದನಪುರದ) ಸಂಧಿವಿಗ್ರಹಿಯು, ಬಾಹುಬಲಿಯ ಅನುಜ್ಞೆಯ ಮೇರೆಗೆ ಪತ್ರವನ್ನೋದತೊಡಗಿದನು.

“(ಪತ್ರದ ಮೊದಲಿನಲ್ಲಿ ಭರತನ ವಿಶೇಷಣಗಳ ವಿವರವಾದ ವರ್ಣನೆಯಿದೆ) ಅಂತಹ ಭರತ ಚಕ್ರವರ್ತಿಯು ತನ್ನ ತಮ್ಮನಾದ ಬಾಹುಬಲಿಯನ್ನು ಆಶೀರ್ವದಿಸಿ, ತನ್ನ ಆಲಿಂಗನವನ್ನೂ ತಿಳಿಸಿ ಆಜ್ಞಾಪಿಸಿರುವುದು ಏನೆಂದರೆ….”
ಸಂಧಿವಿಗ್ರಹಿಯು ಇನ್ನು ಮುಂದಿನ ಒಕ್ಕಣೆಯನ್ನು ಓದಲಿರುವಾಗ, ಬಾಹುಬಲಿಯು ‘ಇನ್ನು ಮುಂದಿನದು ಗೊತ್ತೇ ಇದೆ ಬಿಡು, ಓದುವುದನ್ನು ನಿಲ್ಲಿಸು..’ ಎಂದು ಸೂಚಿಸಿದನು.

ಮುಂದೆ, ಮಹತ್ತರನ ಕಡೆಗೆ ತಿರುಗಿ “ಕೀರ್ತಿಶಾಲಿಯಾದ ಭರತನು ಕ್ಷೇಮವಾಗಿದ್ದಾನೆಯೇ? ತನ್ನ ಎಲ್ಲ ಚಿಂತೆ, ಗೊಡವೆಗಳ ನಡುವೆಯೂ ಆತ ನಮ್ಮನ್ನು ನೆನೆಸಿಕೊಂಡನಲ್ಲ, ಆಹಾ! ಆತನ ದಿಗ್ವಿಜಯ ಯಾತ್ರೆಯೆಲ್ಲ ಯಾವ ತೊಡರಿರದೆ ಜರುಗಿತೇ?….” ಎಂದು ಮುಂತಾಗಿ ಕುಶಲಪ್ರಶ್ನೆಯನ್ನು ಮಾಡಿದನು.

ಮಹತ್ತರನು ಇದೇ ಸಮಯವೆಂದು ಭರತನ ವಿಜಯ ಪ್ರತಾಪಗಳನ್ನೂ, ಅಲ್ಲಿಯವರೆಗೂ ನಡೆದುದೆಲ್ಲವನ್ನೂ ಸವಿಸ್ತಾರವಾಗಿ ವರ್ಣಿಸಿ ಹೇಳಿದನು. ಭರತನಿಗೆ ಎದುರಾಗಿ ಬಂದ ನರ-ಸುರ-ಖೇಚರ ರಾಜರನ್ನು ಮಣಿಸಿ ಸರಿದಾರಿಗೆ ತರಲು ಚಕ್ರರತ್ನವು ಹೇಗೆ ಸಾಕ್ಷಿಯಾಯಿತು ಎಂಬುದನ್ನೂ ತಿಳಿಸಿದನು. ಮುಂದೆ:

“ಎನ್ನಣುಗದಮ್ಮನಿಲ್ಲದೆ
ಬಿನ್ನನೆ ಸಾಮ್ರಾಜ್ಯಮಿನಿತುಮಾರೆಱಕಮುಮ
ತ್ಯುನ್ನತಿಯಲ್ತೆನಗಾತಂ
ಮುನ್ನೆಱಗದೊಡೆಂದು ಬೆಸಸಿಯಟ್ಟಿದನೆನ್ನಂ”     

(ಆದಿಪುರಾಣ ೧೪.೬೨)

‘ನನ್ನ ಪ್ರೀತಿಯ ತಮ್ಮನಿಲ್ಲದಿದ್ದರೆ ಈ ಇಡೀ ಸಾಮ್ರಾಜ್ಯವೇ ವ್ಯರ್ಥವಲ್ಲವೆ! ಅವನು ಮೊದಲು ನನಗೆ ನಮಸ್ಕರಿಸದಿದ್ದರೆ, ಬೇರೆ ಯಾರೇ ನಮಸ್ಕರಿಸಿದರೂ ಅದರಿಂದ ಯಾವ ಅತಿಶಯವಾದ ಉನ್ನತಿಯೂ ಬರಲಾರದು’ ಎಂದು ಆತನು(ಭರತನು) ನನ್ನನ್ನು ನಿನ್ನ ಬಳಿಗೆ ಕಳುಹಿಸಿದ್ದಾನೆ.

ಬಾಹುಬಲಿಗೆ ಈ ಮಾತುಗಳನ್ನೆಲ್ಲ ಕೇಳಿ ಕೋಪವುದಿಸಿತು. ಆದರೂ ಮುಗುಳ್ನಗುತ್ತ, “ಅಯ್ಯಾ, ನೀನು ನಿನ್ನ ದೊರೆಯ ದಿಗ್ವಿಜಯೋನ್ನತಿಯನ್ನು ಹೊಗಳಿ ಹೊಗಳಿ ಮೈಮರೆತೆ. ಬಿಡು, ಈ ಮಾತುಗಳೆಲ್ಲ ನಿನ್ನ ದೊರೆಯ ಭಂಗವನ್ನು ಎತ್ತಿ ಆಡಿದಂತಾಗಿದೆ, ಈಗ. ಅಲ್ಲ, ಚಕ್ರವನ್ನು ಮುಂದಿಟ್ಟುಕೊಂಡು ಹೋಗಿ ತಿರಿದುತಂದ ರಾಜ್ಯವು (ಮನೆಯಲ್ಲಿ)ಅನ್ನವಿದ್ದೂ ಹೊರಗೆ ಹೋಗಿ ಭಿಕ್ಷೆ ಬೇಡಿದಂತಲ್ಲವೆ? ಅದನ್ನೇನು ಹೆಚ್ಚುಗಾರಿಕೆಯೆಂದು ಹೊಗಳುತ್ತೀಯೆ, ಬಿಡು. ನಿಮ್ಮರಸನ ದಿಗ್ವಿಜಯದ ಒಳಗುಟ್ಟೆಲ್ಲ ನಮಗೇನು ತಿಳಿಯದುದೇ?

ಹಿಂದಿನ ಅರಸುಗಳ ಶಾಸನವನ್ನು ಅಳಿಸಿಹಾಕಿ, ಅಲ್ಲಿ ತನ್ನ ಶೌರ್ಯವನ್ನು ಬರೆಸಿಕೊಳ್ಳುವುದಂತೆ. ಇದಾವ ರೀತಿ? ಇದಂತೂ ಬುಧಜನರ ಪರಿಹಾಸಕ್ಕೆ ಗುರಿಯಾಗಿದೆ. ಅಲ್ಲವೇ ಮತ್ತೆ, ವಿಭುವಾದವನಿಗೆ ‘ಧನ’ವೆಂದರೆ ಯಶೋಧನವೇ. ಅದನ್ನು (ಯಶಸ್ಸನ್ನು) ಹೀಗೆ ಕೆಡಿಸಿಕೊಂಡು ಗಳಿಸುವ ಧನವು ಧನವೆನಿಸಿಕೊಳ್ಳುವುದೇ?”

“ಪಿರಿಯಣ್ಣಂಗೆಱಗುವುದೇಂ
ಪರಿಭವಮೇ ಕೀಱಿ ನೆತ್ತಿಯೊಳ್ ಬಾಳಂ ನಿ
ರ್ನೆರಮೂಱಿ ಚಲದಿನೆಱಗಿಸ
ಲಿರೆ ಭರತಂಗೆಱಗುವೆಱಕಮಂಜಮೆಯಲ್ತೇ?”     

–(ಆದಿಪುರಾಣ ೧೪.೭೫)

ಹಿರಿಯಣ್ಣನಿಗೆ ನಮಸ್ಕರಿಸುವುದೇನೂ ಅವಮಾನವಲ್ಲ. ಆದರೆ ಈಗ ಆತ ಕತ್ತಿಯನ್ನು ನೆತ್ತಿಯ ಮೇಲೆ ಗೀರಿ, ಛಲದಿಂದ ತನಗೆ ತಲೆಬಾಗುವಂತೆ ಶಾಸಿಸುತ್ತಿದ್ದಾನೆ. ಹೀಗಿರುವಾಗ ಭರತನಿಗೆ ಎರಗುವುದು ಅಂಜುಬುರುಕತನವಲ್ಲವೆ?

ಆತ ಷಟ್ಖಂಡಮಂಡಲವನ್ನೂ ಆಳುವುದಾದರೆ ಆಳಿಕೊಳ್ಳಲಿ. ದೂರದಿಂದಲೆ ಅದನ್ನು ನೋಡಿ ಸಂತೋಷಿಸುತ್ತೇವೆ. ಅದು ಬಿಟ್ಟು ಅವನಲ್ಲಿಗೆ ಹೋಗಿ, ‘ಜೀಯ, ಅರಸ, ದೇವ..’ ಎಂದು ತಲೆಬಾಗಿ, ಆಳಿನಂತೆ ದೈನ್ಯವಾಗಿ ತನುವನ್ನೊಡ್ಡಲಾರೆ. ನನ್ನ ತಂದೆ ರಾಜ್ಯವನ್ನು ಕೊಟ್ಟು ನಮ್ಮಿಬ್ಬರನ್ನೂ ‘ರಾಜ’ರನ್ನಾಗಿ ಮಾಡಿದನು. ಈಗ ಇವನಾದರೊ ತಾನು ‘ರಾಜಾಧಿರಾಜ’ನೆಂಬ ಹೆಚ್ಚುಗಾರಿಕೆಯನ್ನು ಸೇರಿಸಿಕೊಂಡಿದ್ದಾನೆ. ಚಕ್ರವು ಹುಟ್ಟಿದ್ದರಿಂದ ಅವನಿಗೆ ಈಗ ‘ಚಕ್ರೇಶ್ವರ’ನೆಂಬ ಬಿರುದು ಬಂದಿರಬಹುದು. ಆದರೆ ಆ ಕಾರಣಕ್ಕಾಗಿ ಅವನು ನನ್ನ ಮೇಲೆ ಈ ಆಕ್ರಮಣವನ್ನೇಕೆ ಸಾರಬೇಕು?

“ಪುರುತನಯರ್ ಭುಜಬಲಿಯುಂ
ಭರತನುಮೆನೆ ದೊರೆಗೆವಂದೊಡಾರಳವುಮನೀ
ಧರೆಯಱಿಯಲೊಡಂ ತೂಗಲ್
ಧರೆಗೆ ತುಲಾದಂಡಮಲ್ತೆ ಮದ್ಭುಜದಂಡಂ”     

(ಆದಿಪುರಾಣ ೧೪.೮೧)

“ಭರತನೂ ಪುರುರಾಜನ ಮಗನೆ, ಈ ಬಾಹುಬಲಿಯೂ ಪುರುರಾಜನ ಮಗನೆ. ಇವರಿಬ್ಬರಲ್ಲಿ ಯಾರ ಶಕ್ತಿಸಾಮರ್ಥ್ಯಗಳು ಎಷ್ಟೆಷ್ಟು ಎಂದು ತೂಗಿನೋಡಲು ಸರಿಯಾದ ತಕ್ಕಡಿಯೆಂದರೆ ನನ್ನ ಭುಜದಂಡಗಳೇ, ಅಲ್ಲವೆ?
ಇನ್ನು ಹೆಚ್ಚಿನ ಮಾತೇನು, ನಿನ್ನ ದೊರೆ ಭರತನು ತನ್ನ ಪ್ರಾಣಪ್ರಿಯರಾದವರೆಲ್ಲರ ಬಗೆಗಿನ ಆಸೆಯನ್ನೂ, ತಾನು ಆರ್ಜಿಸಿದ ಸಾಮ್ರಾಜ್ಯದ ಮೇಲಿನ ಆಸೆಯನ್ನೂ ತೊರೆದು ಸಮರರಂಗದಲ್ಲಿ ನನ್ನನ್ನು ಎದುರಿಸಲಿ. ಮುಂದಿನ ಕತೆಯನ್ನು ನೀನೇ ಕಾಣುವೆಯಂತೆ” ಎಂದು ಹೇಳಿ, ಮಹತ್ತರನನ್ನು ತಿರುಗಿ ಕಳುಹಿಸಿದನು.

(ಮುಂದುವರೆಯುವುದು…)Home Forums ಬಾಹುಬಲಿಯ ಕತೆ – ೨

This topic contains 0 replies, has 1 voice, and was last updated by  Lokesh Acharya 2 months, 4 weeks ago.

You must be logged in to reply to this topic.